ಹಾಸನ/ಕಡೂರು: ಹೊಸ ವರ್ಷದ ಸಂಭ್ರಮಾಚರಣೆ ನಡುವೆ ಹಾಸನದಲ್ಲಿ ಭೀಕರ ಅಪಘಾತ ಸಂಭವಿಸಿ ಮೂವರು ಸಾವನ್ನಪ್ಪಿದರು. ಹಾಸನ ಜಿಲ್ಲೆ, ಅರಸೀಕೆರೆ ತಾಲ್ಲೂಕಿನ ಬಾಣಾವಾರ ಬಳಿ ಅಡಿಕೆ ಸಾಗಿಸುತ್ತಿದ್ದ ಬೊಲೆರೋ ಪಿಕಪ್ ವಾಹನದ ಟೈರ್ ಬ್ಲಾಸ್ಟ್ ಆಗಿ ವಾಹನ ಪಲ್ಟಿಯಾಗಿದ್ದು, ಈ ದುರ್ಘಟನೆ ರಾಷ್ಟ್ರೀಯ ಹೆದ್ದಾರಿ 69ನಲ್ಲಿ ಸಂಭವಿಸಿದೆ. ಚಿಕ್ಕಮಗಳೂರು ಜಿಲ್ಲೆ, ಕಡೂರು ತಾಲ್ಲೂಕಿನ ತಂಗ್ಲಿ ಗ್ರಾಮದ ಶಬ್ಬೀರ್ (55), ತಿಮ್ಮಣ್ಣ(53) ಮತ್ತು ಸಂಜಯ್ (45) ಸ್ಥಳದಲ್ಲೇ ಸಾವನ್ನಪ್ಪಿದ್ದು, ಓರ್ವನಿಗೆ ಗಂಭೀರ ಗಾಯವಾಗಿದ್ದು, ಇನ್ನಿಬ್ಬರಿಗೆ ಸಣ್ಣ- ಪುಟ್ಟ ಗಾಯಗಳಾಗಿವೆ. ಗಾಯಾಳುಗಳು ಕಡೂರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಡಿಕೆ ಕೊಯ್ಲು ಮುಗಿಸಿ ಅಡಕೆ ತುಂಬಿರುವ ಚೀಲಗಳನ್ನು ಸಾಗಿಸುವಾಗ ಈ ದುರ್ಘಟನೆ ಸಂಭವಿಸಿದ್ದು, ಘಟನೆ ಸಂಬಂಧ ಬಾಣಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
