ಕೊಟ್ಟಿಗೆಹಾರ: ಸಾಮಾನ್ಯವಾಗಿ ಕುಟುಂಬದೊಂದಿಗೆ ಮನೆಯಲ್ಲಿ ಹುಟ್ಟುಹಬ್ಬ ಆಚರಿಸುವುದು ಸಹಜವಾದರೂ, ಬಣಕಲ್ ಸಮೀಪದ ಚೇಗು ನಿವಾಸಿಗಳಾದ ಪೆಡ್ಡಿ ಲೋಬೊ ದಂಪತಿ ತಮ್ಮ ಮಗ ಶಾಯನ್ ಜೆ. ಲೋಬೊ ಅವರ ಹುಟ್ಟುಹಬ್ಬವನ್ನು ಕಳಸ ತಾಲ್ಲೂಕಿನ ದೇವರಗುಡ್ಡ ದಿವ್ಯ ಕಾರುಣ್ಯಾಲಯ ಅನಾಥಾಶ್ರಮದಲ್ಲಿ ಅಲ್ಲಿನ ನಿವಾಸಿಗಳೊಂದಿಗೆ ಅದ್ಧೂರಿಯಾಗಿ ಆಚರಿಸುವ ಮೂಲಕ ಮಾನವೀಯತೆ ಮೆರೆದರು. ಅನಾಥರೊಂದಿಗೆ ಬೆರೆತು ಅವರ ಮನಸ್ಸಿನಲ್ಲಿ ಅಚ್ಚಳಿಯದ ನೆನಪನ್ನು ಮೂಡಿಸಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪೆಡ್ಡಿ ಲೋಬೊ ಅವರು, “ಅನಾಥರ ಸೇವೆ ಮಾಡುವುದು ಸುಲಭವಲ್ಲ; ಅದಕ್ಕೆ ನಿಸ್ವಾರ್ಥ ಮನೋಭಾವ ಮತ್ತು ದೈವಬಲ ಅಗತ್ಯ. ಅವರೊಂದಿಗೆ ಮಗನ ಹುಟ್ಟುಹಬ್ಬ ಆಚರಿಸುವ ಮೂಲಕ ಅವರ ಜೀವನ ಶೈಲಿಯನ್ನು ಅರಿತುಕೊಳ್ಳಲು ಮತ್ತು ಮಕ್ಕಳಲ್ಲಿ ದಾನಧರ್ಮದ ಮಹತ್ವ ಬೆಳೆಸಲು ಪ್ರಯತ್ನಿಸಿದ್ದೇವೆ. ಮಕ್ಕಳು ತಮ್ಮ ಪೋಷಕರನ್ನು ಅನಾಥಾಶ್ರಮಗಳಿಗೆ ತಳ್ಳದೇ, ಗೌರವದಿಂದ ಕುಟುಂಬದಲ್ಲೇ ನೋಡಿಕೊಳ್ಳಬೇಕು ಎಂಬ ಸಂದೇಶ ನೀಡುವುದು ನಮ್ಮ ಉದ್ದೇಶ. ವಿವಿಧ ರೋಗಗಳಿಂದ ಬಳಲುವವರೇ ನಿಜವಾದ ಅನಾಥರು; ಅವರೊಂದಿಗೆ ಒಂದು ದಿನ ಕಳೆದ ಅನುಭವ ನಮ್ಮ ಕುಟುಂಬಕ್ಕೆ ಅಪಾರ ಸಂತೋಷ ತಂದಿದೆ” ಎಂದರು.
ಕಾರ್ಯಕ್ರಮದಲ್ಲಿ ಶಾಯನ್ ಜೊತೆ ಕೇಕ್ ಕತ್ತರಿಸಿ ಭೋಜನ ಮಾಡಿ, ಅನಾಥಾಶ್ರಮದವರಿಗೆ ಅಗತ್ಯ ದಿನಸಿ ಸಾಮಗ್ರಿಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಪತ್ನಿ ಲೇಮಿನ, ಮಗ ಶಾಯನ್ ಜೇಡನ್ ಲೋಬೊ, ಸೋನಲ್ ಜೇನಿಷ್ ಲೋಬೊ, ಅನಾಥಾಶ್ರಮದ ನಿರ್ವಾಹಕರಾದ ಬಿಬಿನ್ ಜೋಸ್, ಅವರ ಪತ್ನಿ ರೇಷ್ಮ ಮೊಂತೆರೊ ಹಾಗೂ ಇತರರು ಉಪಸ್ಥಿತರಿದ್ದರು.
