ಬೆಂಗಳೂರು (ಜ.22): ನರೇಗಾ ಹೆಸರಿನ ಬದಲಾವಣೆಗೆ ವಿರೋಧ ವ್ಯಕ್ತಪಡಿಸಿ ಕರ್ನಾಟಕ ಸರ್ಕಾರ ಕರೆದಿದ್ದ ವಿಶೇಷ ಅಧಿವೇಶನಕ್ಕೆ ಬರಲು ನಿರಾಕರಿಸಿದ್ದ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರು ಸರ್ಕಾರದ ಮನವೊಲಿಕೆಯ ಬಳಿಕ ಸದನಕ್ಕೆ ಬಂದರೂ, ಸರ್ಕಾರ ಸಿದ್ಧಪಡಿಸಿದ ಭಾಷಣವನ್ನು ಒಂದೂ ನಿಮಿಷವೂ ಓದದೇ ಸಭೆಯಿಂದ ಹೊರನಡೆದರು. ಈ ನಡೆಗೆ ಆಡಳಿತ ಪಕ್ಷ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಸದನದೊಳಗೆ ಬಿ.ಕೆ. ಹರಿಪ್ರಸಾದ್ ಅವರು ರಾಜ್ಯಪಾಲರು ಭಾಷಣ ಓದಲೇಬೇಕೆಂದು ಒತ್ತಾಯಿಸಿದರು. ರಾಜ್ಯಪಾಲರ ಕ್ರಮ ಸಂವಿಧಾನ ಉಲ್ಲಂಘನೆಯಾಗಿದೆ, ಜನರಿಂದ ಆಯ್ಕೆಯಾದ ಪ್ರತಿನಿಧಿಗಳ ಸಭೆಗೆ ಇದೊಂದು ಅವಮಾನ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದು, ಕಾಂಗ್ರೆಸ್ ಶಾಸಕರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸಿದ್ದಾರೆ ಎಂದು ಸಿಎಂ ಆರೋಪಿಸಿದ್ದಾರೆ.
