ಬೆಂಗಳೂರು: ರಾಜ್ಯದಲ್ಲಿ ಸಿಎಂ ಕುರ್ಚಿ ಫೈಟ್ ನಡುವೆಯೇ ಅಹಿಂದ ಸಮಾವೇಶಕ್ಕೆ ದಿನಾಂಕ ನಿಗದಿಯಾಗಿದ್ದು, ಜನವರಿ 25ರಂದು ಮೈಸೂರಿನ ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಸಮಾವೇಶ ನಡೆಸಲು ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ನಿರ್ಧರಿಸಿದೆ. ಸಿಎಂ ಸಿದ್ದರಾಮಯ್ಯ ಅವರ ಬೆಂಬಲಕ್ಕೆ ಅಹಿಂದ ಸಮುದಾಯಗಳು ನಿಂತಿದ್ದು, ಅವರನ್ನು ಬದಲಾಯಿಸದಂತೆ ಹೈಕಮಾಂಡ್ ಮೇಲೆ ಒತ್ತಡ ಹೇರುವ ಉದ್ದೇಶದಿಂದ ಈ ಸಮಾವೇಶ ಆಯೋಜಿಸಲಾಗುತ್ತಿದೆ. ಪೂರ್ವಭಾವಿ ಸಭೆಯಲ್ಲಿ ಸುಮಾರು 15ರಿಂದ 20 ಸಾವಿರ ಜನರನ್ನು ಸೇರಿಸಲು ತೀರ್ಮಾನಿಸಲಾಗಿದ್ದು, ಸಿಎಂಗೆ ಆಹ್ವಾನ ನೀಡದೇ ಅವರ ಪರವಾಗಿ ಸಮಾವೇಶ ನಡೆಸುವುದಾಗಿ ಆಯೋಜಕರು ತಿಳಿಸಿದ್ದಾರೆ. ಈ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಶುಭ ಹಾರೈಸಿದ್ದು, ದೆಹಲಿ ಭೇಟಿಗೆ ಸಂಬಂಧಪಟ್ಟಂತೆ ಅವರು ಮಾತನಾಡಿ, ನಾನು ಯಾರನ್ನೂ ಭೇಟಿ ಮಾಡಿಲ್ಲ, ನಾನು ಯಾರಿಗೂ ತೊಂದರೆ ನೀಡುವುದಕ್ಕೆ ಬಯಸುವುದಿಲ್ಲ ಹೈಕಮಾಂಡ್ ಫ್ರೀ ಹ್ಯಾಂಡ್ ಕೊಟ್ಟಿದ್ದು, ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.
