
ಇತ್ತೀಚಿನ ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಯುದ್ಧಗಳು ಮತ್ತು ರಾಜಕೀಯ ಉದ್ವಿಗ್ನತೆಗಳಿಂದ ಇಂಧನ ಸರಬರಾಜಿನ ಮೇಲೆ ಪರಿಣಾಮ ಬೀರುತ್ತಿದೆ. ಕೆಲವು ದೇಶಗಳ ನಡುವೆ ನಡೆಯುತ್ತಿರುವ ಯುದ್ಧ ಪರಿಸ್ಥಿತಿಗಳಿಂದ ಇಂಧನ ಉತ್ಪಾದನೆ, ಸಾಗಣೆ ಮತ್ತು ವಿತರಣೆಯಲ್ಲಿ ವ್ಯತ್ಯಯ ಉಂಟಾಗಿ ಪೆಟ್ರೋಲ್, ಡೀಸೆಲ್ ಮತ್ತು ಎಲ್ಪಿಜಿ ಗ್ಯಾಸ್ ಸರಬರಾಜು, ಬೇಡಿಕೆ ಹೆಚ್ಚಾಗಿರುವುದು, ಹಾಗೂ ವಿತರಣಾ ವ್ಯವಸ್ಥೆಯ ಅಡಚಣೆಗಳಿಂದ ಗ್ಯಾಸ್ ಲಭ್ಯತೆಯಲ್ಲಿ ಕೊರತೆ ಉಂಟಾಗಿದ್ದು, ಈ ಕಾರಣಗಳಿಂದ ಅಡುಗೆ ಅನಿಲವನ್ನು ಜಾಗ್ರತೆಯಿಂದ ಬಳಸಬೇಕಾದ ಅಗತ್ಯ ಎದುರಾಗಿದೆ. ಇಂತಹ ಸಂದರ್ಭದಲ್ಲಿ ಸರಿಯಾದ ಅಡುಗೆ ವಿಧಾನಗಳ ಜೊತೆಗೆ ಬಳಸುವ ಪಾತ್ರೆಗಳೂ ಪ್ರಮುಖ ಪಾತ್ರ ವಹಿಸುತ್ತವೆ. ಹಳೆಯ ಕಾಲದಲ್ಲಿ ಬಳಸುತ್ತಿದ್ದ ತಾಮ್ರ, ಹಿತ್ತಾಳೆ, ಕಂಚು ಮತ್ತು ಕಬ್ಬಿಣದ ಪಾತ್ರೆಗಳು ಒಮ್ಮೆ ಬಿಸಿಯಾದರೆ ದೀರ್ಘಕಾಲ ಶಾಖವನ್ನು ಉಳಿಸಿಕೊಳ್ಳುವ ಗುಣ ಹೊಂದಿದ್ದು, ಕಡಿಮೆ ಸಮಯ ಉರಿಯಲ್ಲಿ ಇಟ್ಟರೂ ಆಹಾರ ಸುಲಭವಾಗಿ ತಯಾರಾಗುವುದರಿಂದ ಗ್ಯಾಸ್ ಬಳಕೆ ಕಡಿಮೆಯಾಗುತ್ತದೆ. ಜೊತೆಗೆ ಇವುಗಳಲ್ಲಿ ಅಡುಗೆ ಮಾಡಿದರೆ ಆಹಾರದ ಪೌಷ್ಟಿಕಾಂಶವೂ ಉತ್ತಮವಾಗಿ ಉಳಿಯುತ್ತದೆ. ತಾಮ್ರ ಮತ್ತು ಹಿತ್ತಾಳೆ ಪಾತ್ರೆಗಳಲ್ಲಿ ಇಟ್ಟ ನೀರು ಅಥವಾ ಆಹಾರ ಸೇವನೆಯಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚಲು ಸಹಾಯವಾಗುತ್ತದೆ ಹಾಗೂ ಉರಿಯೂತ ಮತ್ತು ಕೀಲುನೋವು ಕಡಿಮೆ ಮಾಡಲು ನೆರವಾಗುತ್ತದೆ. ಕಬ್ಬಿಣದ ಪಾತ್ರೆಗಳಲ್ಲಿ ಅಡುಗೆ ಮಾಡಿದರೆ ದೇಹಕ್ಕೆ ಅಗತ್ಯವಾದ ಕಬ್ಬಿಣಾಂಶ ದೊರೆಯಲು ಸಹಾಯವಾಗುತ್ತದೆ ಮತ್ತು ರಕ್ತಹೀನತೆಯನ್ನು ತಡೆಯಲು ಸಹಕಾರಿ. ಜೊತೆಗೆ ಜೀರ್ಣಕ್ರಿಯೆ ಸುಧಾರಿಸಿ ಆಸಿಡಿಟಿ, ಅಜೀರ್ಣ ಮತ್ತು ಮಲಬದ್ಧತೆಯಂತಹ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಕಾರಿಯಾಗುತ್ತದೆ. ಹೀಗಾಗಿ ಹಳೆಯ ಕಾಲದ ಈ ಲೋಹದ ಪಾತ್ರೆಗಳು ಇಂಧನ ಉಳಿಸುವುದರ ಜೊತೆಗೆ ಆರೋಗ್ಯಕ್ಕೂ ಉಪಕಾರಿಯಾಗುವ ಉತ್ತಮ ಆಯ್ಕೆಯಾಗಿದೆ.






