ಕಾರ್ಕಳ: ಕರಾವಳಿ ಹಾಗೂ ಮಲೆನಾಡ ಗಡಿ ಭಾಗದಲ್ಲಿ ನಕ್ಸಲರ ಓಡಾಟ ನಡೆಯುತ್ತಿದೆ ಎಂಬ ವದಂತಿ ಕೇಳಿ ಬಂದಿದ್ದು ಕೇರಳದಿಂದ ನಕ್ಸಲರು ಮತ್ತೆ ಕರ್ನಾಟಕ ಕಡೆ ಮುಖ ಮಾಡಿದ್ದಾರೆ ಎಂಬ ವರದಿ ಆತಂಕಕ್ಕೆ ಕಾರಣವಾಗಿದೆ. ಕಳೆದ ಮೂರು ದಿನಗಳಿಂದ ಕಾರ್ಕಳ ತಾಲೂಕಿನ ಈದು ಗ್ರಾಮದಲ್ಲಿ ನಕ್ಸಲರು ಮತ್ತೆ ಕಾಣಿಸಿಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದು, ನಾಲ್ವರು ಶಸ್ತ್ರಸಜ್ಜಿತ ಯುವಕರ ತಂಡವು ಕಾರ್ಕಳ ತಾಲೂಕಿನ ಈದು ಗ್ರಾಮದ ಮುಸ್ಲಿಂ ಕಾಲೋನಿಯ ಬಳಿಯಿರುವ ಬಂಡೆಕಲ್ಲು ಸಮೀಪ ಸೋಮವಾರ ಹಾಡುಹಗಲೇ ಕಾಣಿಸಿಕೊಂಡಿದ್ದು, ಕಾಡುತ್ಪತ್ತಿ ಸಂಗ್ರಹಿಸಲು ತೆರಳಿದ ಸ್ಥಳೀಯರು ಭಯಬೀತರಾಗಿದ್ದಾರೆ. ಪೊಲೀಸ್ ಇಲಾಖೆಯಿಂದ ನಕ್ಸಲರ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ನಡೆಯುತ್ತಿದ್ದು, ನಕ್ಸಲರ ಬಗ್ಗೆ ಮಾಹಿತಿಯುಳ್ಳ ಬಿತ್ತಿಪತ್ರ ಹಾಗೂ ಜಾಗೃತಿ ಪತ್ರಗಳು ಕೂಡಾ ನಕ್ಸಲ್ಪೀಡಿತ ಪ್ರದೇಶಗಳಲ್ಲಿ ಹಂಚಲಾಗುತ್ತಿದೆ.