
ಕೈಮಗ್ಗ ಉದ್ಯಮವು ಭಾರತದ ಶ್ರೇಷ್ಠ ಪರಂಪರೆಗಳಲ್ಲಿ ಒಂದು ಆಗಿದ್ದು, ಕೃಷಿಯ ಬಳಿಕ ದೇಶದ ಅತಿದೊಡ್ಡ ಉದ್ಯಮ ವಲಯವಾಗಿರುವ ಈ ಕ್ಷೇತ್ರವು ಶತಮಾನಗಳ ಇತಿಹಾಸವನ್ನೂ, ಸಾಂಸ್ಕೃತಿಕ ಮಹತ್ವವನ್ನೂ ಒಳಗೊಂಡಿದೆ. ಮೈಸೂರಿನ ರೇಶ್ಮೆ ಸೀರೆ, ಆಂಧ್ರದ ಕಲಮಕಾರಿ, ಗುಜರಾತ್ನ ಬಂಧನಿ, ತಮಿಳುನಾಡಿನ ಕಾಂಜೀವರಂ ಸೀರೆಗಳಂತಹ ವೈವಿಧ್ಯಮಯ ಕೈಮಗ್ಗ ಉತ್ಪನ್ನಗಳು ಜಗತ್ತಿನಾದ್ಯಂತ ಖ್ಯಾತಿಯನ್ನು ಗಳಿಸಿದ್ದರೂ, ಇತ್ತೀಚಿನ ಕಾಲದಲ್ಲಿ ತಂತ್ರಜ್ಞಾನ ಮತ್ತು ಪಾಶ್ಚಾತ್ಯ ವಸ್ತ್ರಗಳ ಪ್ರಭಾವದಿಂದ ಈ ಉದ್ಯಮ ಕುಂಠಿತವಾಗುತ್ತಿದೆ. ಇಂಥ ಸಂದರ್ಭದಲ್ಲಿ, ದೇಶದ ಈ ಶ್ರೀಮಂತ ಪರಂಪರೆಯನ್ನು ಸಂರಕ್ಷಿಸಿ, ನೇಕಾರರ ಜೀವನೋಪಾಯ ಮತ್ತು ಕೈಮಗ್ಗ ಕ್ಷೇತ್ರವನ್ನು ಉತ್ತೇಜಿಸಲು ಸರ್ಕಾರವು ಪ್ರತಿವರ್ಷ ಆಗಸ್ಟ್ 7 ರಂದು “ರಾಷ್ಟ್ರೀಯ ಕೈಮಗ್ಗ ದಿನ”ವನ್ನು ಆಚರಿಸುತ್ತಿದೆ. ಈ ದಿನದ ಆಚರಣೆ 1905ರಲ್ಲಿ ಆರಂಭವಾದ ಸ್ವದೇಶಿ ಚಳವಳಿಯ ಸ್ಮರಣಾರ್ಥವಾಗಿದೆ. ವಿದೇಶಿ ವಸ್ತುಗಳನ್ನು ಬಹಿಷ್ಕರಿಸಿ ಸ್ವದೇಶಿ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡಿದ ಈ ಚಳವಳಿಯಲ್ಲಿ ಕೈಮಗ್ಗ ಉದ್ಯಮದ ಪಾತ್ರ ಮಹತ್ವಪೂರ್ಣವಾಗಿತ್ತು. ಈ ಹಿನ್ನೆಲೆಯಲ್ಲಿಯೇ 2015ರಿಂದ ಈ ದಿನವನ್ನು ರಾಷ್ಟ್ರವ್ಯಾಪಿಯಾಗಿ ಆಚರಿಸಲಾಗುತ್ತಿದೆ. ಕೈಮಗ್ಗವು ದೇಶದ ಆರ್ಥಿಕತೆಯಲ್ಲಿಯೂ ಮಹತ್ವದ ಪಾತ್ರವಹಿಸಿದ್ದು, ಇದರಿಂದ ಲಕ್ಷಾಂತರ ಜನರು ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನೇಕಾರ ಸಮುದಾಯದ ಕೊಡುಗೆಗಳಿಗೆ ಗೌರವ ಸಲ್ಲಿಸಲು, ಕೈಮಗ್ಗ ಉತ್ಪನ್ನಗಳನ್ನು ಜನರಿಗೆ ಪರಿಚಯಿಸಲು, ಹಾಗೂ ಈ ವಲಯದ ಅಭಿವೃದ್ಧಿಗೆ ಪ್ರೋತ್ಸಾಹ ನೀಡಲು ಈ ದಿನದ ಆಚರಣೆಗೆ ಮಹತ್ವವಿದೆ. ಈ ದಿನದಂದು ಫ್ಯಾಷನ್ ಶೋಗಳು, ಕರಕುಶಲ್ಯ ಪ್ರದರ್ಶನಗಳು, ವಿಚಾರ ಸಂಕಿರಣಗಳು, ಕಾರ್ಯಾಗಾರಗಳಂತಹ ಕಾರ್ಯಕ್ರಮಗಳ ಮೂಲಕ ಕೈಮಗ್ಗದ ಮಹತ್ವವನ್ನು ಸಮಾಜದ ಮುಂದಿಡಲಾಗುತ್ತದೆ.