
ಶಿವಮೊಗ್ಗ: ಶಿವಮೊಗ್ಗದಲ್ಲಿ ಆಗಸ್ಟ್ 13ರಂದು ಬಹುರಾಷ್ಟ್ರೀಯ ಕಂಪನಿಗಳ ವಿರುದ್ಧ ಬೃಹತ್ ಪ್ರತಿಭಟನೆ ನಡೆಯಲಿದೆ. ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಕೇಂದ್ರೀಯ ಕಾರ್ಮಿಕ ಸಂಘಟನೆಗಳು ಜಂಟಿಯಾಗಿ ಕರೆ ನೀಡಿರುವ ಈ ಹೋರಾಟ, ‘ಭಾರತ ಬಿಟ್ಟು ತೊಲಗಿ’ ಚಳವಳಿಯ 83ನೇ ವಾರ್ಷಿಕೋತ್ಸವದ ಅಂಗವಾಗಿ ದೇಶವ್ಯಾಪಿಯಾಗಿ ನಡೆಯಲಿದೆ. ರೈತ ಸಂಘದ ಜಿಲ್ಲಾಧ್ಯಕ್ಷ ರಾಘವೇಂದ್ರ ಮತ್ತು ಹೋರಾಟಗಾರ ಕೆ.ಎಲ್. ಅಶೋಕ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭಾರತ ಸರ್ಕಾರವು ಕೆಲವೇ ದೊಡ್ಡ ಕಾರ್ಪೊರೇಟ್ ಕಂಪನಿಗಳ ಲಾಭಕ್ಕಾಗಿ ಕೋಟ್ಯಾಂತರ ಭಾರತೀಯರ ಹಿತವನ್ನು ಬಲಿಗೊಡುವುದನ್ನು ತಕ್ಷಣ ನಿಲ್ಲಿಸಬೇಕು ಎಂದು ಒತ್ತಾಯಿಸಿದರು. ಬ್ರಿಟನ್ ಜೊತೆಗಿನ ಸಮಗ್ರ ಆರ್ಥಿಕ ಮತ್ತು ವಾಣಿಜ್ಯ ಒಪ್ಪಂದ (CETA) ಹಾಗೂ ಅಮೆರಿಕದೊಂದಿಗೆ ಸಮಗ್ರ ಆರ್ಥಿಕ–ವಾಣಿಜ್ಯ ಒಪ್ಪಂದ ಮತ್ತು ಮುಕ್ತ ವ್ಯಾಪಾರ ಒಪ್ಪಂದಗಳನ್ನು ಮಾಡಬಾರದೆಂದು ಅವರು ಎಚ್ಚರಿಸಿದರು. ಇಂತಹ ಒಪ್ಪಂದಗಳು ಹೈನುಗಾರಿಕೆ, ತರಕಾರಿ, ಹಣ್ಣುಗಳು ಮತ್ತು ಸಂಸ್ಕರಿಸಿದ ಆಹಾರಗಳ ಆಮದು ಹೆಚ್ಚಿಸುವ ಮೂಲಕ ವಿದೇಶಿ ಹೂಡಿಕೆಯನ್ನು ಉತ್ತೇಜಿಸಿ, ದೇಶದ ರೈತರು ಹಾಗೂ ಸಣ್ಣ ಕೃಷಿ ವ್ಯಾಪಾರಿಗಳಿಗೆ ತೀವ್ರ ನಷ್ಟ ಉಂಟುಮಾಡುತ್ತವೆ ಎಂದು ಹೇಳಿದರು. ಅಮೆರಿಕ ವಿಧಿಸಿರುವ ಶೇಕಡಾ 25ರ ಆಮದು ಸುಂಕವನ್ನು ಭಾರತವು ತೀವ್ರವಾಗಿ ವಿರೋಧಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು. ಜೊತೆಗೆ, ಅಮೆರಿಕದೊಂದಿಗೆ ಕುಲಾಂತರಿ ತಳಿಗಳ ಬೆಳೆಗಳು, ಆಹಾರ ಧಾನ್ಯಗಳು, ಸೋಯಾ, ಜೋಳ, ಹತ್ತಿ ಸೇರಿದಂತೆ ಅನೇಕ ಉತ್ಪನ್ನಗಳನ್ನು ಬೃಹತ್ ಪ್ರಮಾಣದಲ್ಲಿ ಆಮದು ಮಾಡುವ ಮಾತುಕತೆಗಳನ್ನು ನಿಲ್ಲಿಸಬೇಕೆಂದು ಬೇಡಿಕೆ ಇಟ್ಟರು. ಕೃಷಿ ಮಾರುಕಟ್ಟೆ ಕುರಿತ ರಾಷ್ಟ್ರೀಯ ನೀತಿಯ ಚೌಕಟ್ಟು ಮತ್ತು ಹೊಸ ರಾಷ್ಟ್ರೀಯ ಸಹಕಾರ ನೀತಿಗೆ ವಿರೋಧ ವ್ಯಕ್ತಪಡಿಸಿ, ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿಯನ್ನು ಖಾತರಿಪಡಿಸಬೇಕು, ಸಮಗ್ರ ಸಾಲ ಮನ್ನಾ ನೀತಿ ಜಾರಿಗೊಳಿಸಬೇಕು, ಮೈಕ್ರೋ ಫೈನಾನ್ಸ್ ಕಿರುಕುಳವನ್ನು ತಡೆಗಟ್ಟಬೇಕು, ಬಲವಂತದ ಭೂಸ್ವಾಧೀನ ಕಾಯ್ದೆಯನ್ನು ಸಂಪೂರ್ಣ ನಿಲ್ಲಿಸಬೇಕು ಮತ್ತು ವಿದ್ಯುತ್ ಖಾಸಗೀಕರಣದ ಪ್ರಯತ್ನಗಳನ್ನು ಹಿಂತೆಗೆದುಕೊಳ್ಳಬೇಕೆಂದು ಅವರು ಆಗ್ರಹಿಸಿದರು.