
ಚಿಕ್ಕಮಗಳೂರು: ನಕ್ಸಲ್ ನಾಯಕ ಬಿ.ಜಿ ಕೃಷ್ಣಮೂರ್ತಿಯನ್ನು ಕೇರಳ ಪೋಲಿಸರು ಚಿಕ್ಕಮಗಳೂರು ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ನಕ್ಸಲ್ ಹೋರಾಟದ ಹಾದಿಯಲ್ಲಿ ಬಿ.ಜಿ. ಕೃಷ್ಣಮೂರ್ತಿ ಮೇಲೆ ಚಿಕ್ಕಮಗಳೂರು, ಉಡುಪಿ ಹಾಗೂ ಮಂಗಳೂರು ಹಲವು ಪ್ರಕರಣ ದಾಖಲಾಗಿದ್ದವು. ವಿಚಾರಣೆ ಸಂಭಂದ ಕೇರಳ ಪೋಲಿಸರು ಚಿಕ್ಕಮಗಳೂರು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಬಿ.ಜಿ ಕೃಷ್ಣಮೂರ್ತಿ ಮೇಲೆ ಒಟ್ಟು ೬೬ ಪ್ರಕರಣಗಳು ದಾಖಲಾಗಿವೆ. ಇಂದು ಚಿಕ್ಕಮಗಳೂರು ಜಿಲ್ಲೆಯ ಪ್ರಕರಣ ಸಂಭಂದ ವಿಚಾರಣೆ ನಡೆಸಿದ ಕೋರ್ಟ್ ಜುಲೈ ೨೧ ಕ್ಕೆ ಮುಂದೂಡಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ನಕ್ಸಲ್ ನಾಯಕ ಸಾಕೇತ್ ರಾಜನ್ ಎನ್ಕೌಂಟರ್ ಆದ ಬಳಿಕ ಸುಮಾರು ಒಂದೂವರೆ ದಶಕಗಳ ಕಾಲ ಬಿ.ಜಿಕೃಷ್ಣಮೂರ್ತಿ ನಕ್ಸಲ್ ನಾಯಕತ್ವ ವಹಿಸಿಕೊಂಡಿದ್ದರು.
೨೦೧೪ರ ಬಳಿಕ ನಿರಂತರ ಕಾಂಬಿಂಗ್, ಮಲೆನಾಡಿಗರ ಬೆಂಬಲ ಕಡಿಮೆಯಾದ ಹಿನ್ನೆಲೆ ಕೃಷ್ಣಮೂರ್ತಿ ಸೇರಿ ಹಲವಾರು ನಕ್ಸಲರು ಕೇರಳದತ್ತ ಮುಖ ಮಾಡಿದ್ದರು. ಕಳೆದ ವರ್ಷ ಸರ್ಕಾರದ ಪ್ಯಾಕೇಜ್ ಅಡಿಯಲ್ಲಿ ಬಿ.ಜಿ ಕೃಷ್ಣಮೂರ್ತಿ ಪೋಲಿಸರಿಗೆ ಶರಣಾಗಿದ್ದರು. ಅವರು ಶರಣಾದ ಬಳಿಕ ಸುಮಾರು ೮ ಜನ ನಕ್ಸಲರು ಕರ್ನಾಟಕದಲ್ಲಿ ಶರಣಾಗತಿಯಾಗಿದ್ದರು. ಸಿಎಂ ಮುಂದೆ ೭ ಜನರು ಶರಣಾಗಿದ್ದಾರೆ. ಓರ್ವ ಚಿಕ್ಕಮಗಳೂರು ಎಸ್ಪಿ ಮುಂದೆ ಶರಣಾಗಿದ್ದನು. ಇಂದು ವಿಚಾರಣೆ ಮುಗಿದ ಬಳಿಕ ಕೇರಳ ಪೋಲಿಸರು ಬಿ.ಜಿ ಕೃಷ್ಣಮೂರ್ತಿಯನ್ನ ಮತ್ತೆ ತಮ್ಮ ವಶಕ್ಕೆ ಪಡೆದು ಕರೆದೊಯ್ದರು.