ಶೃಂಗೇರಿ/ಬೆಂಗಳೂರು: ಮಲೆನಾಡ ಬಹುಮುಖ ಪ್ರತಿಭೆ ನಾಗಶ್ರೀ ಬೇಗಾರ್ ಪ್ರತಿಷ್ಟಿತ ಜೀ ಕುಟುಂಬ ಅವಾರ್ಡ್ ಕಾರ್ಯಕ್ರಮದಲ್ಲಿ ಬೆಸ್ಟ್ ಸಹೋದರಿ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಬೆಂಗಳೂರಿನ ನಂದಿ ಗ್ರೌಂಡ್ಸ್ನಲ್ಲಿ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್ ಇವರಿಂದ ಬೆಸ್ಟ್ ಸಹೋದರಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಮಲೆನಾಡಿನ ಖ್ಯಾತ ಕಲಾವಿದರೂ, ನಿರ್ದೇಶಕರೂ ಆಗಿರುವ ರಮೇಶ್ ಬೇಗಾರ್ ಹಾಗೂ ಭಾಗ್ಯಶ್ರೀ ದಂಪತಿಗಳ ಪುತ್ರಿಯಾಗಿರುವ ನಾಗಶ್ರೀ ಬಹುಮುಖ ಪ್ರತಿಭೆ ಹೊಂದಿರುವ ಮಲೆನಾಡ ಮಗಳು, ಇವರು ನೃತ್ಯ, ನಾಟಕ, ಯಕ್ಷಗಾನ ಮೊದಲಾದ ಕಲಾ ಪ್ರಕಾರಗಳಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಶ್ರೀ ಆದಿ ಚುಂಚನಗಿರಿ ಶೃಂಗೇರಿ ಶಾಖಾ ಮಠದಿಂದ ಚುಂಚೋತ್ಸವ ಯುವ ಪ್ರಶಸ್ತಿ, ಕಲ್ಕಟ್ಟೆ ಕನ್ನಡತಿ, ಬಾಳೆಹೊನ್ನೂರಿನ ಅಯ್ಯಪ್ಪ ಸಮಿತಿಯ ಕಲಾ ಪ್ರಶಸ್ತಿ ಪಡೆದಿರುವ ಇವರು ಹುಚ್ಚಿಕ್ಕಿ, ಜಲಪಾತ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿ ಮಲೆನಾಡಿನಲ್ಲಿ ಮನೆಮಾತಾಗಿದ್ದಾರೆ. ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್ ಇವರಿಂದ ನಾಗಶ್ರೀ ಇತರ ಮೂವರು ಸಹೋದರಿ ಯರೊಂದಿಗೆ ಪ್ರಶಸ್ತಿ ಸ್ವೀಕರಿಸಿದರು. ಪ್ರಶಸ್ತಿ ಸ್ವೀಕರಿಸಿ ಮಾತಾಡಿದ ನಾಗಶ್ರೀ ತಂಡದ ಸಹಕಾರದಿಂದ ತನ್ನ ಮೂಲ ವಯಸ್ಸಿಗೆ ಮೀರಿದ ಈ ಗಂಭೀರ ಪಾತ್ರದಲ್ಲಿ ತೊಡಗುವಂತಾಯ್ತು. ಮನೆಯವರ ಪ್ರೋತ್ಸಾಹ ಮತ್ತು ರಂಗಭೂಮಿಯ ಭದ್ರ ನೆಲೆ ತನ್ನ ಸಾಧನೆಗೆ ಕಾರಣವಾಗಿದೆ ಎಂದಿದ್ದಾರೆ.