
ನಾಗರ ಪಂಚಮಿ ಹಬ್ಬವು ಹಿಂದೂ ಧರ್ಮದೊಂದಿಗೆ ವಿಶೇಷವಾದ ನಂಬಿಕೆಯನ್ನು ಹೊಂದಿದ ಹಬ್ಬವಾಗಿದೆ. ಯಾವಾಗಲೂ ನಾಗರ ಪಂಚಮಿ ಹಬ್ಬವನ್ನು ಶ್ರಾವಣ ಮಾಸದ ಶುಕ್ಲ ಪಕ್ಷದ 5ನೇ ದಿನದಂದು ಆಚರಿಸಲಾಗುತ್ತದೆ. ಈ ದಿನ ನಾಗ ದೇವರನ್ನು ಪೂಜಿಸುವುದಕ್ಕಾಗಿ ಮತ್ತು ನಾಗರ ಆಶೀರ್ವಾದವನ್ನು ಪಡೆದುಕೊಳ್ಳುವುದಕ್ಕಾಗಿ ಒಂದು ಉತ್ತಮ ಸಮಯವೆಂದು ಪರಿಗಣಿಸಲಾಗುತ್ತದೆ. ಪೂಜೆಯ ಅಂಗವಾಗಿ ದೇವಸ್ಥಾನ ಹಾಗೂ ಹುತ್ತಗಳಿಗೆ ಭೇಟಿ ನೀಡಿ, ಎಲ್ಲಾ ಕೆಡಕುಗಳಿಂದ ತಮ್ಮನ್ನು ರಕ್ಷಿಸಲೆಂದು ಬೇಡಿಕೊಂಡು ಜನರು ಹಾಲು ಮತ್ತು ಬೆಳ್ಳಿ ಆಭರಣಗಳನ್ನು ಅರ್ಪಿಸುತ್ತಾರೆ ಮತ್ತು ಈ ಹಬ್ಬವನ್ನು ಅಣ್ಣ-ತಂಗಿ ಇಬ್ಬರೂ ಸೇರಿ ಪೂಜಿಸಲ್ಪಡುವ ಹಬ್ಬವೆಂದು ಪ್ರತೀತಿ ಇದೆ. ಇದು ಹಬ್ಬಗಳ ಸಾಲಿಗೆ ನಾಂದಿ ಹಾಡುತ್ತದೆ. ನಾಗರ ಪಂಚಮಿಯ ನಂತರ ರಕ್ಷಾಬಮಧನ, ಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ, ದಸರಾ, ದೀಪಾವಳಿ ಹೀಗೆ ಹಬ್ಬಗಳು ಒಂದಾದ ನಂತರ ಒದರಂತೆ ಆರಂಭಗೊಳ್ಳುತ್ತದೆ. ನಾಗರ ಪಂಚಮಿಯನ್ನು ಭಾರತದ ಹಲವಾರು ಪ್ರಾಂತ್ಯಗಳಲ್ಲಿ ಆಚರಿಸಲಾಗುತ್ತದೆ. ಮಹಾರಾಷ್ಟ್ರದ ಬತ್ತೀಸ ಶಿರಾಳ ಎಂಬ ಗ್ರಾಮದಲ್ಲಿ ನಾಗರ ಪಂಚಮಿಯಂದು ಜೀವಂತ ಹಾವುಗಳನ್ನು ಪೂಜಿಸಲಾಗುತ್ತದೆ. ಈ ದಿನದಂದು ಹೆಣ್ಣು ಮಕ್ಕಳು ತಮ್ಮ ಸಹೋದರನ ಒಳಿತಿಗೆ ಹುತ್ತಕ್ಕೆ ಹಾಲನ್ನು ಎರೆದು ಪೂಜಿಸುತ್ತಾರೆ. ಉತ್ತರ ಕರ್ನಾಟಕದಲ್ಲಿ ಈ ಹಬ್ಬವನ್ನು ಮೂರು ದಿನಗಳ ಕಾಲ ಆಚರಿಸಲಾಗುತ್ತದೆ.