ಬೆಳಗಾವಿ: ಬೆಳಗಾವಿಯ ಭೂತರಾಮನಹಟ್ಟಿ ಗ್ರಾಮದಲ್ಲಿರುವ ಕಿತ್ತೂರು ಚೆನ್ನಮ್ಮ ಕಿರು ಮೃಗಾಲಯದಲ್ಲಿ ಕೇವಲ 2ದಿನದ ಅಂತರದಲ್ಲಿ 20ಕ್ಕೂ ಅಧಿಕ ಕೃಷ್ಣಮೃಗಗಳು ಅನುಮಾನಸ್ಪದವಾಗಿ ಮೃತಪಟ್ಟಿದ್ದು, ಇದರಿಂದ ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾಗಿದೆ. ನವೆಂಬರ್ 13ರಂದು 8 ಕೃಷ್ಣಮೃಗಗಳು ಮೃತಪಟ್ಟಿದ್ದು, ಪ್ರಾಥಮಿಕ ಮಾಹಿತಿಯ ಪ್ರಕಾರ ಬ್ಯಾಕ್ಟೀರಿಯಾ ಸೋಂಕಿನಿಂದ ಸಾವನ್ನಪ್ಪಿದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಮೃತಪಟ್ಟ ಮೃಗಗಳ ಮೃತದೇಹವನ್ನು ಲ್ಯಾಬ್ಗೆ ಕಳುಹಿಸಲಾಗಿದ್ದರಿಂದ ವರದಿ ಇನ್ನಷ್ಟೇ ಬರಬೇಕಿತ್ತು, ಆದರೆ ಆ ವರದಿ ಬರುವ ಮುನ್ನವೇ ಮತ್ತೆ ಒಂದೇ ದಿನದಲ್ಲಿ 20ಕ್ಕೂ ಅಧಿಕ ಮೃಗಗಳು ಸಾವನ್ನಪ್ಪಿದ್ದು ಪ್ರಕರಣವನ್ನು ಮತ್ತಷ್ಟು ಗೊಂದಲಕ್ಕೆ ಎಡೆಮಾಡಿಕೊಟ್ಟಿದೆ. ಮೃಗಗಳ ಸಾವಿನ ಪ್ರಕರಣಗಳು ಅನಿರೀಕ್ಷಿತವಾಗಿ ಹೆಚ್ಚಾಗಿರುವುದರಿಂದ ಅರಣ್ಯ ಇಲಾಖೆ ತಕ್ಷಣ ಕ್ರಮಕ್ಕೆ ಮುಂದಾಗಿದೆ.
