
ಮೈಸೂರು:ಉಪ ಲೋಕಾಯುಕ್ತ ಕೆ.ಎನ್. ಫಣೀಂದ್ರ ಅವರು ಶನಿವಾರ ಮೂರನೇ ದಿನದ ನಗರ ಭೇಟಿಯ ಸಂದರ್ಭದಲ್ಲಿ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ಭೇಟಿ ನೀಡಿ, ಆಸ್ಪತ್ರೆಯ ವಿವಿಧ ವಾರ್ಡುಗಳಲ್ಲಿ ಸುದೀರ್ಘ ಪರಿಶೀಲನೆ ನಡೆಸಿದರು. ಅವರು ಪ್ರತಿಯೊಂದು ವಿಭಾಗಕ್ಕೆ ಭೇಟಿ ನೀಡಿ ರೋಗಿಗಳೊಂದಿಗೆ ನೇರ ಸಂವಾದ ನಡೆಸಿ ಚಿಕಿತ್ಸೆ, ಊಟ, ಕುಡಿಯುವ ನೀರು, ಶೌಚಾಲಯ, ಸ್ವಚ್ಛತೆ ಸೇರಿದಂತೆ ವಿವಿಧ ಮೂಲಸೌಕರ್ಯಗಳ ಕುರಿತು ಮಾಹಿತಿ ಪಡೆದರು. ಎಕ್ಸರೇ, ಸ್ಕ್ಯಾನಿಂಗ್, ರಕ್ತಪರೀಕ್ಷೆ ಹಾಗೂ ವೈದ್ಯಕೀಯ ಸೇವೆಗಳ ಬಗ್ಗೆ ಸಮೀಕ್ಷೆ ನಡೆಸಿದ ಅವರು, ಆಸ್ಪತ್ರೆಯ ಸೌಕರ್ಯಗಳಲ್ಲಿನ ದೋಷಗಳ ಬಗ್ಗೆ ತೀವ್ರ ಗಮನ ಹರಿಸಿದರು. ಕೆಲವರು ಹಣಕ್ಕಾಗಿ ಬೇಡಿಕೆ ಇಡುವ ಬಗ್ಗೆ ದೂರು ನೀಡಿದ್ದು, ಈ ಕುರಿತು ಸಾಬೀತು ಸಿಕ್ಕರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಆಸ್ಪತ್ರೆಯೊಳಗೆ ನಾಯಿ ತಿರುಗಾಡುತ್ತಿರುವುದನ್ನು ಕಂಡು ಅಧಿಕಾರಿಗಳನ್ನು ಪ್ರಶ್ನಿಸಿದ ಉಪ ಲೋಕಾಯುಕ್ತರು, ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ತಕ್ಷಣ ಕ್ರಮವಹಿಸಬೇಕೆಂದು ಸೂಚನೆ ನೀಡಿದರು. ಸಿಬ್ಬಂದಿಗಳಿಂದ ರೋಗಿಗಳಿಗೆ ಸೌಜನ್ಯಪೂರ್ವಕ ಸೇವೆ ಅಗತ್ಯವಿರುವುದನ್ನು ಎತ್ತಿ ತೋರಿದ ಅವರು, ಸಾರ್ವಜನಿಕರಿಂದ ಸ್ವಚ್ಛತೆಗೆ ಸಂಬಂಧಿಸಿದ ಪ್ರತಿಕ್ರಿಯೆ ಪಡೆದು ಆಸ್ಪತ್ರೆಯನ್ನು ನಿಜವಾದ ಆರೈಕೆ ಕೇಂದ್ರವನ್ನಾಗಿಸಬೇಕೆಂದು ಅಭಿಪ್ರಾಯವನ್ನ ತಿಳಿಸಿದರು. ಈ ಭೇಟಿ ವೇಳೆ ಜಿಲ್ಲಾಧಿಕಾರಿ ಜಿ. ಲಕ್ಷೀಕಾಂತ ರೆಡ್ಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಯುಕೇಶ್ ಕುಮಾರ್ ಹಾಗೂ ಕೆ.ಆರ್. ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ನಯಾಜ್ ಪಾಷಾ ಸೇರಿದಂತೆ ಹಲವಾರು ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.