
ಮೈಸೂರು: ಮೈಸೂರು ಜಿಲ್ಲೆಯಲ್ಲಿ ಯೂರಿಯಾ ಅಥವಾ ಇತರೆ ಯಾವುದೇ ರಾಸಾಯನಿಕ ಗೊಬ್ಬರಗಳ ಕೊರತೆಯಿಲ್ಲ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ.ಎಚ್ ರವಿ ಸ್ಪಷ್ಟ ಪಡಿಸಿದ್ದಾರೆ. ಆಗಸ್ಟ್ ತಿಂಗಳಿಗೆ ಬೇಕಾಗಿರುವ 16550 ಮೆಟ್ರಿಕ್ ಟನ್ ಗೊಬ್ಬರಕ್ಕೆ ವಿರುದ್ಧವಾಗಿ, ಜಿಲ್ಲೆಯಲ್ಲಿ ಈಗಾಗಲೇ30,450 ಮೆಟ್ರಿಕ್ ಟನ್ ದಾಸ್ತಾನು ಇರುತ್ತದೆ. ರೈತರು ಯೂರಿಯಾ ಗೊಬ್ಬರವನ್ನು ನೇರವಾಗಿ ನೆಟ್ಟಣಿಗೆ ಬಳಸದೆ, ಎನ್ಪಿಕೆ ಸಂಯುಕ್ತ ಗೊಬ್ಬರ ಬಳಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ಯೂರಿಯಾವನ್ನು ಮೊದಲ ಬಾರಿಗೆ ನಾಟಿ ಮಾಡಿದ ೨೫ನೇ ದಿನ ಹಾಗೂ ಎರಡನೇ ಬಾರಿಗೆ 45-50 ನೇ ದಿನದಲ್ಲಿ ಮಾತ್ರ ಮೇಲು ಗೊಬ್ಬರವಾಗಿ ಬಳಸಿದರೆ ಉತ್ತಮ. ರೈತರು ಗೊಂದಲಕ್ಕೀಡಾಗಬಾರದೆಂದು ಸೂಚನೆ ನೀಡಿದ ಅವರು, ಅನಧಿಕೃತವಾಗಿ ಗೊಬ್ಬರವನ್ನು ದಾಸ್ತಾನು ಮಾಡಿದರೆ ಅಥವಾ ಕೃತಕ ಕೊರತೆಯ ಭಾವನೆ ಹುಟ್ಟಿಸಿದರೆ ಅವರ ಲೈಸೆನ್ಸ್ ರದ್ದು ಪಡಿಸಲಾಗುವುದು ಎಂಬ ಎಚ್ಚರಿಕೆಯನ್ನು ಕೂಡ ನೀಡಿದ್ದಾರೆ.