
ಚಿಕ್ಕಮಗಳೂರು: ಚಿಕ್ಕಮಗಳೂರಿನ ಮೂಡಿಗೆರೆ ತಾಲ್ಲೂಕಿನ ದೇವವೃಂದ ಗ್ರಾಮದ ನಿವಾಸಿಯಾಗಿರುವ ಡಿ.ಆರ್. ವಿಜಯ ಹಾಗೂ ಪತ್ನಿ ಪಾರ್ವತಿ ಎಚ್.ಎನ್ ಅವರ ಹೆಸರಿನಲ್ಲಿ ಏಳು ಎಕರೆ ಜಮೀನನ್ನು ಹೊಂದಿದ್ದರು. ಮೂಡಿಗೆರೆಯ ಕರ್ನಾಟಕ ಗ್ರಾಮೀಣ ಬ್ಯಾಂಕ್ನಿಂದ ವೃದ್ಧದಂಪತಿಗಳು ಅಂದಾಜು 30 ಲಕ್ಷ ರೂಪಾಯಿಯಷ್ಟು ಸಾಲವನ್ನು ಜಮೀನಿನ ದಾಖಲೆಗಳ ಆಧಾರದ ಮೇಲೆ ಪಡೆದಿದ್ದರು. ಆದರೆ ಕೊರೋನ, ಕಾಡು ಪ್ರಾಣಿಗಳ ಕಿರಿಕಿರಿಯಿಂದಾಗಿ ಬೆಳೆಗಳು ನಾಶವಾಗಿದ್ದು, ಸಮಯಕ್ಕೆ ಸರಿಯಾಗ ಸಾಲಕಟ್ಟಲು ಸಾಧ್ಯವಾಗಲಿಲ್ಲ. ಇದರ ಮಧ್ಯದಲ್ಲಿ 2024ರಲ್ಲಿ ದಂಪತಿಗಳು 5.30 ಲಕ್ಷ ಹಣವನ್ನು ಬ್ಯಾಂಕಿಗೆ ಕಟ್ಟಿದ್ದಾರೆ. ಉಳಿದ ಹಣ ಪಾವತಿಸಲು ಸಮಯ ನೀಡುವುದಾಗಿ ಬ್ಯಾಂಕಿನವರು ತಿಳಿಸಿದ್ದರು. ಆದರೆ ಬಳಿಕ ಬ್ಯಾಂಕಿನವರು ದಂಪತಿಗಳಿಗೆ ತಿಳಿಸದೆ ಸರ್ಫೇಸಿ ಕಾಯ್ದೆಯಡಿ ಹರಾಜು ಹಾಕಿ ಜಮೀನನ್ನು ಮಾರಾಟ ಮಾಡಿದ್ದಾರೆ.
ಈ ವಿಚಾರ ದಂಪತಿಗಳ ಗಮನಕ್ಕೆ ಬಂದಿದ್ದು, ಜಮೀನನ್ನು ಕಳೆದುಕೊಂಡು ದಿಕ್ಕು ತೋಚದಂತಾಗಿದ್ದಾರೆ, ಇತ್ತ ದುಡಿಯಲು ಆಗದೆ ಜೀವನ ಸಾಗಿಸಲು ಪರದಾಡುವಂತಗಾಗಿದೆ ಆದ ಕಾರಣ ದಂಪತಿಗಳು ತಹಶೀಲ್ದಾರ್ ರಾಜಶೇಖರ್ ಮೂಲಕ ರಾಷ್ಟ್ರಪತಿಗಳಿಗೆ, ದಯಾಮರಣವನ್ನು ಕೋರಿ ಅರ್ಜಿ ಸಲಿಸಿದ್ದಾರೆ.