ಬೆಂಗಳೂರು: 2026ರ ಜನವರಿ 26ರಂದು ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪರೇಡ್ನಲ್ಲಿ ಕರ್ನಾಟಕದ ಪರವಾಗಿ ‘ಮಿಲ್ಲೆಟ್ ಟು ಮೈಕ್ರೋಚಿಪ್’ ಪರಿಕಲ್ಪನೆಯ ವಿಶಿಷ್ಟ ಸ್ತಬ್ಧಚಿತ್ರ ಪ್ರದರ್ಶನಗೊಳ್ಳಲಿದ್ದು, ಕೃಷಿ ಸಮೃದ್ಧಿಯಿಂದ ಹಿಡಿದು ಉನ್ನತ ತಂತ್ರಜ್ಞಾನ ಮತ್ತು ಮೈಕ್ರೋಚಿಪ್ ಉತ್ಪಾದನೆವರೆಗೆ ರಾಜ್ಯ ಸಾಧಿಸಿರುವ ಸಮತೋಲನಯುತ ಪ್ರಗತಿಯನ್ನು ಇದು ಅನಾವರಣಗೊಳಿಸಲಿದೆ. ಸಿರಿಧಾನ್ಯಗಳ ಉತ್ಪಾದನೆ, ಪೌಷ್ಟಿಕ ಆಹಾರದ ಮಹತ್ವ, ರೈತ ಕುಟುಂಬಗಳ ಶಕ್ತಿ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ, ಸೆಮಿಕಂಡಕ್ಟರ್ ಹಾಗೂ ಎಲೆಕ್ಟ್ರಾನಿಕ್ಸ್ ವಲಯಗಳಲ್ಲಿ ಕರ್ನಾಟಕ ಸಾಧಿಸಿರುವ ಮುನ್ನಡೆಯನ್ನೇ ಈ ಸ್ತಬ್ಧಚಿತ್ರ ಪ್ರತಿಬಿಂಬಿಸಲಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ತಿಳಿಸಿದೆ. ಸ್ತಬ್ಧಚಿತ್ರದ ಮುಂಭಾಗದಲ್ಲಿ ಉದಯಿಸುತ್ತಿರುವ ಸೂರ್ಯ ನಿರಂತರ ಪ್ರಗತಿಯ ಸಂಕೇತವಾಗಿದ್ದು, ಸಿರಿಧಾನ್ಯಗಳು, ರೈತ ಕುಟುಂಬ, ಅಣು ಮಾಲಿಕ್ಯೂಲ್ಗಳ ಮಾದರಿ, ಎಐ ರೋಬೋಟ್, ರಾಕೆಟ್, ಟೆಲಿಮೆಡಿಸಿನ್ ಮೂಲಕ ಸೇವೆ ನೀಡುತ್ತಿರುವ ವೈದ್ಯೆ, ಡ್ರೋನ್ ಬಳಸಿ ಕೃಷಿ ಮಾಡುತ್ತಿರುವ ಮಹಿಳೆ ಹಾಗೂ ಕೈಗಾರಿಕಾ ಕಾರ್ಮಿಕರ ದೃಶ್ಯಗಳು ವಿಜ್ಞಾನ, ಆರೋಗ್ಯ, ಕೃಷಿ ಮತ್ತು ಕೈಗಾರಿಕೆಯ ಸಮನ್ವಯವನ್ನು ತೋರಿಸಲಿವೆ. ಅಂತಿಮವಾಗಿ ಮಿನುಗುವ ಮೈಕ್ರೋಚಿಪ್ ಮತ್ತು ಸರ್ಕ್ಯೂಟ್ ವಿನ್ಯಾಸಗಳ ನಡುವೆ ರೋಬೋಟ್ ಮುಖದ ಸಾಂಕೇತಿಕ ಚಿತ್ರಣವು ಪರಂಪರೆಯಿಂದ ಪ್ರಗತಿಯತ್ತ, ಮಣ್ಣಿನಿಂದ ಯಂತ್ರಗಳತ್ತ ಸಾಗುತ್ತಿರುವ ಆತ್ಮನಿರ್ಭರ ಕರ್ನಾಟಕದ ಪಯಣವನ್ನು ಹೈಲೈಟ್ ಮಾಡಲಿದೆ.
