
ಶೃಂಗೇರಿ: ಶೃಂಗೇರಿ ತಾಲ್ಲೂಕು ಕಿಗ್ಗಾ ಪಂಚಾಯಿತಿ ವ್ಯಾಪ್ತಿಯ ನಿವೃತ್ತ ಅಂಗನವಾಡಿ ಶಿಕ್ಷಕಿ ವೃದ್ಧ ಮಹಿಳೆ ನಾಗರತ್ನ ಕೆ.ಎಸ್ ರವರಿಗೆ ಸ್ಥಳೀಯ ಪಂಚಾಯಿತಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮಾಡಿದ ಮಹಾದುಪಕಾರದಿಂದ ಇಂದು ನಾಗರತ್ನ ಜಿಲ್ಲಾಧಿಕಾರಿಗಳಿಗೆ “ದಯಾಮರಣ” ಕೋರಿ ಪತ್ರ ಬರೆದಿದ್ದಾರೆ.
ಘಟನೆಯ ವಿವರ: ನಾಗರತ್ನ ಒಂಟಿಯಾಗಿರುವುದರಿಂದ ತನ್ನ ಅಕ್ಕನ ಮಗನಾದ ಕೆ.ಆರ್ ನಟೇಶ್ರವರ ಮನೆಯಲ್ಲಿ 2019ರಿಂದ ವಾಸವಿದ್ದು, ಅವರ ದತ್ತು ತಾಯಿಯಾದ ಮಹಾಲಕ್ಷವರ ಮರಣ ಪತ್ರದ ವಿಲ್ ಪ್ರಕಾರ ಅವರ ಹೆಸರಿನಲ್ಲಿದ್ದ ಮನೆ 2007ರಲ್ಲಿ ನಾಗರತ್ನ ರವರ ಹೆಸರಿಗೆ ವರ್ಗಾವಣೆಗೊಂಡಿರುತ್ತದೆ. ಆದರೆ 2009ರ ಮಹಾ ಮಳೆಗೆ ಮನೆಯು ಬಿದ್ದು ಹೋದ ಕಾರಣ ದಿನಾಂಕ 29-01-2024ರಂದು ಪಂಚಾಯಿತಿಗೆ ಅರ್ಜಿ ಸಲ್ಲಿಸಿದ್ದು. ಇದಕ್ಕೆ ತಕರಾರು ಬಂದ ಕಾರಣ. ಗ್ರಾಮ ಪಂಚಾಯಿತಿಯವರು ಕಾನೂನು ಸಲಹೆಗೆ ಗ್ರಾಮ ಪಂಚಾಯಿತಿಯ ವಕೀಲರಿಗೆ ಕಳುಹಿಸಿದ್ದರು. ವಕೀಲರು ಕೊಟ್ಟ ಕಾನೂನು ಸಲಹೆಯ ಪತ್ರದಲ್ಲಿ ಈ ನಿವೇಶನದ ಸಂಪೂರ್ಣ ಮಾಲಿಕತ್ವ ನಾಗರತ್ನರವರದ್ದೇ ಆಗಿತ್ತು. ವೃದ್ಧೆಯ ಹೆಸರಿನ ಈಸ್ವತ್ತನ್ನು ದಾಖಲಿಸಬಹುದು ಎಂದು ತಿಳಿಸಿದ್ದರು. ಈ ಕಾನೂನು ಸಲಹೆಯನ್ನು ಆಧರಿಸಿ ಮರ್ಕಲ್ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಾಗರತ್ನ ರವರಿಗೆ ಈ-ಸ್ವತ್ತನ್ನು ನೀಡಬೇಕೆಂದು ಸರ್ವಾನುಮತದಿಂದ ಅನುಮೋದನೆಗೊಂಡಿತ್ತು.
ಮರ್ಕಲ್ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಮಹೇಶ್ ದಿನಾಂಕ 01-09-2024ರಂದು ನಿವೇಶನದ ಸರ್ವೇಗೆ ಪಿ.ಡಿ.ಒ ಬರಲು 5,000 ಬೇಕೆಂದು ವೃದ್ಧೆಯ ಅಕ್ಕನ ಮಗನಾದ ನಟೇಶ್ ರವರ ಪತ್ನಿ ಶಿಲ್ಪಾರವರ ಅಕೌಂಟಿನಿಂದ ಫೋನ್ ಪೇ ಮಾಡಿಸಿಕೊಂಡಿದ್ದು, ಮತ್ತೊಬ್ಬ ಗ್ರಾಮ ಪಂಚಾಯಿತಿಯ ಸದಸ್ಯ ಖುಮೃದ್ದೀನ್ ಪುನ: ಪಿ.ಡಿ.ಒ ಗೆ ದುಡ್ಡು ಕೊಡಬೇಕೆಂದು 2,000 ರೂಪಾಯಿಯನ್ನು ಹಾಕಿಸಿಕೊಂಡಿರುತ್ತಾರೆ. ಸರ್ವೆಗೆ ಬಂದ ಪಿ.ಡಿ.ಒ ರಘುವೀರ್ರವರು ನಾಗರತ್ನ ಹೆಸರಿನಲ್ಲಿರುವ 2ಗುಂಟೆ ಶೆಡ್ಯುಲ್ ಸ್ವತ್ತನ್ನು ಸಂಪೂರ್ಣ ಈಸ್ವತ್ತು ಮಾಡಿ ಕೊಡಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹೇಶ್ರವರ ಹೆಸರಿಗೆ 40,000 ರೂ ನೀಡಬೇಕೆಂದು ಹೇಳಿದ್ದರು. ಆದರೆ ನಾಗರತ್ನ ಇನ್ನು ನನ್ನ ಬಳಿ ಹಣ ಇಲ್ಲ ಎಂದಿದ್ದಾರೆ. ಇದಕ್ಕೆ ರಘುವೀರ್ ಕಾಸಿಗೆ ತಕ್ಕ ಕಜ್ಜಾಯ ಎಂಬಂತೆ ಕೇವಲ ಅರ್ಧ ಗುಂಟೆ ಜಾಗಕ್ಕೆ ಮಾತ್ರ ಈ-ಸ್ವತ್ತು ಮಾಡಿದ್ದಾನೆ! ಇದರಿಂದ ಬೇಸತ್ತ ನಾಗರತ್ನ ಪಂಚಾಯಿತಿ ವಿರುದ್ಧ ಕಾನೂನು ಸಲಹಾ ಮಂಡಳಿ ಶೃಂಗೇರಿಗೆ ಅರ್ಜಿ ಸಲ್ಲಿಸಿದ್ದರು. ನಂತರ ರಘುವೀರ್ ತಮ್ಮಿಂದ ತಪ್ಪಾಗಿರುವುದಾಗಿ, ಹಾಗೆಯೇ ನಿವೇಶನದ ಅಳತೆಯನ್ನು ಸರಿಪಡಿಸಿಕೊಡುವುದಾಗಿ ತಿಳಿಸಿದ್ದರು. ಆದರೆ ಅಷ್ಟರಲ್ಲಿ ಅವರು ಸೇವೆಯಲ್ಲಿ ಅಮಾನತು ಗೊಂಡರು.
ದಿನಾಂಕ 22-05-2025ರಂದು ನ್ಯಾಯಾಲಯದಲ್ಲಿ ಸದರಿ ಮರ್ಕಲ್ ಗ್ರಾಮ ಪಂಚಾಯಿತಿ ಪಿ.ಡಿ.ಒ ಲಕ್ಷಣ್ರವರು ಈ ನಿವೇಶನವನ್ನು ಸಂಪೂರ್ಣ ಸರ್ವೇ ಮಾಡಿ ಈಸ್ವತ್ತು ಮಾಡಿಕೊಂಡು ಮುಂದಿನ ಹಿಯರಿಂಗ್ಗೆ ಬರುವುದಾಗಿ ಕಾಲಾವಕಾಶ ಕೇಳಿದ್ದರು. ಅದರಂತೆ 24-06-2025ರಂದು ವೃದ್ಧೆಯ ನಿವೇಶನಕ್ಕೆ ಸರ್ವೇ ಮಾಡಲು ಬಂದಿದ್ದರು. ಆದg ಈ ಮಹಾನುಬಾವ ಹಿಂದಿನ ಪಿ.ಡಿ.ಒ ಮಾಡಿದ್ದ ಅರ್ಧ ಗುಂಟೆ ಈ-ಸ್ವತ್ತನ್ನು ವಜಾ ಮಾಡಿದ್ದಾನೆ. ಈ ಸಂದರ್ಭದಲ್ಲಿ ಪಿ.ಡಿ.ಒ ತಮ್ಮ ಜೊತೆಗೆ ವಿನಾಯಕ ಶಾಸ್ತ್ರಿ ಹೊಸಕೊಪ್ಪ ಹಾಗೂ ಅವರ ಸಂಬಂಧಿ ಲಲಿತಾಕ್ಷಿ ಮೇಲಿನಬೈಲ್ ರವರನ್ನು ಕರೆ ತಂದಿದ್ದರು. ಇವರು ನಾಗರತ್ನ ಅವರ ದೂರದ ಸಂಬಂಧಿಗಳು. ಆದರೆ ಇವರಿಗೆ ಈ ಜಾಗದ ಯಾವುದೇ ಹಕ್ಕು ಇಲ್ಲ. ಪಿ.ಡಿ.ಒ ಲಕ್ಷಣ್ ವೃದ್ಧೆಯ ಹೆಸರಿನಲ್ಲಿರುವ ನಿವೇಶನವನ್ನು ವಿನಾಯಕ ಶಾಸ್ತ್ರಿ ಹೊಸಕೊಪ್ಪ ಹೆಸರಿಗೆ ಬರೆದುಕೊಡಬೇಕಾಗಿ ಬೆದರಿಕೆ ಹಾಕಿ, ಎಲ್ಲರೂ ಅವ್ಯಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎಂದು ನಾಗರತ್ನ ಆರೋಪಿಸಿದ್ದಾರೆ. ಸದ್ಯ ಬ್ರೈನ್ ಟ್ಯೂಮರ್ನಿಂದ ಬಳಲುತ್ತಿರುವ ನಾಗರತ್ನಾರಿಗೆ ಯಾವುದೇ ವರಮಾನವೂ ಇಲ್ಲ. ಇತ್ತ ಇದ್ದ ಮನೆಗೂ ಈ ನೀಚ ಜನಗಳು ದಾಖಲೆ ನೀಡುತ್ತಿಲ್ಲ. ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹೇಶ್ ಹೆಗ್ತೂರು, ವಿನಾಯಕ ಶಾಸ್ತ್ರಿ ಹೊಸಕೊಪ್ಪ, ಮರ್ಕಲ್ ಗ್ರಾಮ ಪಂಚಾಯಿತಿಯ ಕಾರ್ಯನಿರ್ವಹಿಸಿದ ರಘುವೀರ್ ಹಾಗೇಯೇ ಪ್ರಸ್ತುತ ಗ್ರಾಮ ಪಂಚಾಯಿತಿಯ ಕಾರ್ಯನಿರ್ವಹಿಸುತ್ತಿರುವ ಪಿ.ಡಿ.ಒ ಲಕ್ಷಣ್ ಇವರೆಲ್ಲರು ಆರ್ಥಿಕವಾಗಿ ಬಲಾಡ್ಯರಾಗಿದ್ದು ಹಾಗೆಯೇ ಅಧಿಕಾರಿ ಶಾಹಿಯಲ್ಲಿ ಪ್ರಭಾವಿಗಳಾಗಿದ್ದಾರೆ. ಅವರ ವಿರುದ್ಧ ಸೆಣಸುವುದು ನನಗೆ ಸಾಧ್ಯವಿಲ್ಲ ಎಂದು ಆರೋಪಿಸಿ ನಾಗರತ್ನ ಜಿಲ್ಲಾಧಿಕಾರಿಗಳಿಗೆ ದಯಾ ಮರಣಕೋರಿ ಪತ್ರ ಬರೆದಿದ್ದು, ಒಂದು ವೇಳೆ ಅದರೊಳಗೆ ತಾನು ಮರಣ ಹೊಂದಿದರೆ ಈ ಮೇಲಿನ ಎಲ್ಲರೂ ಹೊಣೆಗಾರರಾಗಿರುತ್ತಾರೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಈ ಪ್ರಕರಣದಿಂದ ಆಡಳಿತ ವ್ಯವಸ್ಥೆ ತಲೆ ತಗ್ಗಿಸುವಂತಾಗಿದೆ, ಒಟ್ಟಿನಲ್ಲಿ ಕಿಗ್ಗಾ ಪಂಚಾಯಿತಿಯ ಕಾರ್ಯವೈಕರಿ ಜನ ಪ್ರತಿನಿಧಿಗಳು ಮಾನವೀಯತೆ ಮತ್ತು ಲಜ್ಜೆಗೇಡಿತನ ಮರೆತಿದ್ದಾರೆ ಎಂಬುದಕ್ಕೆ ನಿದರ್ಶನವಾಗಿರುವುದು ಮಾತ್ರ ವಿಪರ್ಯಾಸವೇ ಸರಿ!