
ಮಧ್ಯಪ್ರದೇಶ: ಶ್ರಾವಣ ಮಾಸದಲ್ಲಿ ಉಪವಾಸ ಮತ್ತು ಶಿವನ ಆರಾಧನೆ ಪ್ರಾಚೀನ ಹಿಂದೂ ಸಂಪ್ರದಾಯವಾಗಿದ್ದರೂ, ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ‘ಮ್ಯಾಕ್ಸಿ’ ಎಂಬ ಹೆಣ್ಣು ಶ್ವಾನದ ಧಾರ್ಮಿಕ ನಂಬಿಕೆ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಎಲ್ಲೆಡೆಯೂ ವೈರಲ್ ಆಗುತ್ತಿದೆ. ಉಜ್ಜಯಿನಿಯ ನಾನಾಖೇಡಾ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿರುವ ಈ ಸ್ಪೆಷಲ್ ಸ್ನಿಫರ್ ಡಾಗ್ ಮ್ಯಾಕ್ಸಿ, ಇತ್ತೀಚಿನ ವರ್ಷಗಳಲ್ಲಿ ಶ್ರಾವಣ ಮಾಸದ ಪ್ರತಿಯೊಂದು ಸೋಮವಾರವೂ ಉಪವಾಸವನ್ನು ಆಚರಿಸುತ್ತಿದ್ದು, ಶಿವನ ಭಕ್ತೆಯಾಗಿ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಅದರ ನಿರ್ವಾಹಕರ ಪ್ರಕಾರ, ಮ್ಯಾಕ್ಸಿ ಈ ಮಾಸದಲ್ಲಿ ಮಾಂಸಾಹಾರವನ್ನು ಸಂಪೂರ್ಣವಾಗಿ ಬಿಟ್ಟಿದ್ದು, ಹಸಿರು ತರಕಾರಿ, ಹಾಲು ಅಥವಾ ನೀರನ್ನು ಮಾತ್ರ ಸೇವಿಸುತ್ತೆ. ಇತರ ದಿನಗಳಲ್ಲಿ ಸಾಮಾನ್ಯವಾಗಿ ಆಹಾರ ಸೇವಿಸುವ ಈ ಶ್ವಾನ, ಶ್ರಾವಣದ ಸೋಮವಾರ ಬಂದಾಗ ಮಾತ್ರ ತಿನ್ನುವುದನ್ನು ತಿರಸ್ಕರಿಸಿ, ಶಿವದೇವಾಲಯದ ಬಳಿ ಶಾಂತಿಯುತವಾಗಿ ಕುಳಿತಿರುತ್ತದೆ. ಈ ವಿಶಿಷ್ಟ ಭಕ್ತಿಯ ಅಭ್ಯಾಸವನ್ನು ಮ್ಯಾಕ್ಸಿ ಕಳೆದ ಎರಡು ವರ್ಷಗಳಿಂದ ಮುಂದುವರಿಸುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅದರ ಭಾವಚಿತ್ರಗಳು ಮತ್ತು ವೀಡಿಯೊಗಳು ವ್ಯಾಪಕವಾಗಿ ಹರಡಿವೆ. ಹಲವರು ಮ್ಯಾಕ್ಸಿಯನ್ನು “ಶಿವನ ನಿಜವಾದ ಭಕ್ತೆ” ಎಂದು ಪ್ರಶಂಸೆ ಮಾಡಿರುವರೆಂದರೆ, ಇನ್ನು ಕೆಲವರು ಮನುಷ್ಯರಲ್ಲಿ ಕಂಡುಬರದ ನಂಬಿಕೆಯನ್ನು ಈ ಶ್ವಾನ ಹೊಂದಿದೆ ಎಂದು ಕೊಂಡಾಡುತ್ತಿದ್ದಾರೆ.