ಹೊಸ ವರ್ಷದ ಆರಂಭದಲ್ಲೇ ರಾಜ್ಯ ಸರ್ಕಾರ ಉದ್ಯೋಗಾರ್ಥಿಗಳಿಗೆ ಸಿಹಿ ಸುದ್ದಿ ನೀಡಿದ್ದು, 2026ರಲ್ಲಿ ಕರ್ನಾಟಕದಲ್ಲಿ ಬೃಹತ್ ನೇಮಕಾತಿಗೆ ಸಿದ್ಧತೆ ನಡೆಸಲಾಗಿದೆ. ಹಣಕಾಸು ಇಲಾಖೆಯ ಅನುಮೋದನೆಯೊಂದಿಗೆ ಮೊದಲ ಹಂತದಲ್ಲಿ 24,300 ಹುದ್ದೆಗಳ ಭರ್ತಿಗೆ ಚಾಲನೆ ಸಿಗಲಿದ್ದು, ಒಟ್ಟು 56,000ಕ್ಕೂ ಹೆಚ್ಚು ಖಾಲಿ ಹುದ್ದೆಗಳನ್ನು ಹಂತ ಹಂತವಾಗಿ ತುಂಬುವ ಯೋಜನೆ ಇದೆ. ಶಾಲಾ ಶಿಕ್ಷಣ ಮತ್ತು ಆರೋಗ್ಯ ಇಲಾಖೆಗಳಲ್ಲಿನ ಖಾಲಿ ಹುದ್ದೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ವಿಶೇಷವಾಗಿ ವೈದ್ಯರ ಕೊರತೆ ನೀಗಿಸಲು ಕ್ರಮ ಕೈಗೊಳ್ಳಲಾಗಿದೆ. ಇದರಿಂದ 2026ನೇ ವರ್ಷ ರಾಜ್ಯದಲ್ಲಿ ಮಹತ್ವದ ಸರ್ಕಾರಿ ನೇಮಕಾತಿಯ ವರ್ಷವಾಗಲಿದೆ.
