ದಕ್ಷಿಣ ಕನ್ನಡ–ಚಿಕ್ಕಮಗಳೂರು ಜಿಲ್ಲೆಗಳನ್ನು ಸಂಪರ್ಕಿಸುವ ಚಾರ್ಮಾಡಿ ಘಾಟಿ ವ್ಯಾಪ್ತಿಯ ಕೊಟ್ಟಿಗೆಹಾರ ಸಮೀಪದ ಮೂಡಿಗೆರೆ ಅರಣ್ಯ ವಲಯದಲ್ಲಿನ ಅರಣ್ಯ ಪ್ರದೇಶದಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಪಶ್ಚಿಮ ಘಟ್ಟಗಳ ಸಾಲಿನ ಸೂಕ್ಷ್ಮ ಹುಲ್ಲುಗಾವಲು ಪ್ರದೇಶ ಸಂಪೂರ್ಣವಾಗಿ ಧಗಧಗಿಸಿ ಉರಿಯುತ್ತಿದೆ. ಗಾಳಿಯ ವೇಗ ಹೆಚ್ಚಿರುವುದರಿಂದ ಬೆಂಕಿ ವೇಗವಾಗಿ ಹರಡಿದ್ದು, ಅರಣ್ಯ ಸಂಪತ್ತಿಗೆ ಗಂಭೀರ ಹಾನಿಯಾಗುವ ಆತಂಕ ವ್ಯಕ್ತವಾಗಿದೆ. ಚಾರ್ಮಾಡಿ ಘಾಟಿ ರಸ್ತೆಯ ಪಕ್ಕದಲ್ಲೇ ಬೆಂಕಿ ಕಾಣಿಸಿಕೊಂಡಿರುವುದರಿಂದ ಸಂಚರಿಸುವ ವಾಹನ ಸವಾರರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಿರುವ ಶಂಕೆಯೂ ವ್ಯಕ್ತವಾಗಿದ್ದು, ಅರಣ್ಯ ಇಲಾಖೆ ಮುಂಜಾಗ್ರತಾ ಕ್ರಮವಾಗಿ ಬೆಂಕಿ ರೇಖೆ ಮಾಡದೆ ನಿರ್ಲಕ್ಷ ವಹಿಸಿದ್ದೇ ಈ ಅನಾಹುತಕ್ಕೆ ಕಾರಣವೆಂಬ ಆರೋಪಗಳು ಕೇಳಿಬಂದಿವೆ.
