
ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಇಸ್ರೇಲ್–ಇರಾನ್ ಯುದ್ಧದ ಪರಿಣಾಮವಾಗಿ ದೇಶದಾದ್ಯಂತ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ ಬೆಂಗಳೂರು ಸೇರಿದಂತೆ ಹಲವೆಡೆ ಗ್ಯಾಸ್ ಅಭಾವ ತಲೆದೋರಿದೆ. ಇದರ ಪರಿಣಾಮವಾಗಿ ಕಮರ್ಷಿಯಲ್ ಗ್ಯಾಸ್ ಸಿಗದೆ ಹೋಟೆಲ್ ಉದ್ಯಮ ಸಂಕಷ್ಟಕ್ಕೆ ಸಿಲುಕಿದ್ದು, ಕೆಲವು ಹೋಟೆಲ್ಗಳು ತಾತ್ಕಾಲಿಕವಾಗಿ ಬೀಗ ಹಾಕುವ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿಗೆ ಪತ್ರ ಬರೆದು ಕೂಡಲೇ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಿ ಗ್ಯಾಸ್ ಪೂರೈಕೆ ಸರಿಪಡಿಸಬೇಕೆಂದು ಮನವಿ ಮಾಡಿದ್ದಾರೆ. ಬೆಂಗಳೂರಿನಲ್ಲಿ ದಿನಕ್ಕೆ ಸುಮಾರು 1080 ಮೆಟ್ರಿಕ್ ಟನ್ ಗ್ಯಾಸ್ ಅನ್ನು ಐಒಸಿಎಲ್, ಹೆಚ್ಪಿಸಿಎಲ್ ಮತ್ತು ಬಿಪಿಸಿಎಲ್ ಕಂಪನಿಗಳ ಮೂಲಕ ಪೂರೈಕೆ ಮಾಡಲಾಗುತ್ತಿತ್ತು, ಆದರೆ ಈಗ ಅದರಲ್ಲಿ ವ್ಯತ್ಯಯ ಉಂಟಾಗಿ ಹೋಟೆಲ್, ಮದುವೆ ಮಂಟಪ, ಹಾಸ್ಟೆಲ್ ಹಾಗೂ ಮನೆಯಿಂದ ದೂರ ಇರುವ ವಿದ್ಯಾರ್ಥಿಗಳು ಮತ್ತು ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಮರ್ಷಿಯಲ್ ಗ್ಯಾಸ್ ಕೊರತೆಯಿಂದ ಕೆಲವು ಹೋಟೆಲ್ಗಳು ಸೀಮಿತ ಆಹಾರ ಪದಾರ್ಥಗಳನ್ನು ಮಾತ್ರ ನೀಡುತ್ತಿರುವುದಾಗಿ ಗ್ರಾಹಕರಿಗೆ ನೋಟಿಸ್ ಪ್ರಕಟಿಸಿದ್ದರೆ, ಮತ್ತೊಂದೆಡೆ ಡೊಮೆಸ್ಟಿಕ್ ಗ್ಯಾಸ್ಗೂ ಬೇಡಿಕೆ ಹೆಚ್ಚಾಗಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬುಕ್ಕಿಂಗ್ ಮಾಡಲು ಮುಂದಾಗಿದ್ದಾರೆ. ಬುಕ್ಕಿಂಗ್ ಪ್ರಮಾಣ ಸುಮಾರು 70% ಹೆಚ್ಚಾದ ಹಿನ್ನೆಲೆಯಲ್ಲಿ ಗ್ಯಾಸ್ ಬುಕ್ಕಿಂಗ್ ಸರ್ವರ್ ಸ್ಲೋ ಆಗಿ ಕಾರ್ಯನಿರ್ವಹಿಸುತ್ತಿದ್ದು, ಕೆಲವು ಕಡೆ ಸರ್ವರ್ ಸಮಸ್ಯೆ ಕಾಣಿಸಿಕೊಂಡಿದೆ. ಇದರಿಂದ ಜನರು ನೇರವಾಗಿ ಗ್ಯಾಸ್ ಏಜೆನ್ಸಿಗಳ ಬಳಿ ತೆರಳಿ ಸಾಲಿನಲ್ಲಿ ನಿಂತು ಬುಕ್ಕಿಂಗ್ ಮಾಡಲು ಯತ್ನಿಸುತ್ತಿದ್ದು, ಸರ್ಕಾರ ಶೀಘ್ರ ಸಮಸ್ಯೆ ಪರಿಹರಿಸಬೇಕೆಂದು ಒತ್ತಾಯಿಸಿದ್ದಾರೆ.




