
ಕುಂದಾಪುರ: ಗ್ರಾಮ ಪಂಚಾಯಿತಿ ಸರಿಯಾದ ಕ್ರಮದಲ್ಲಿ ಕಸಗಳನ್ನು ವಿಲೇವಾರಿ ಮಾಡುತ್ತಿದ್ದರೂ ಜನರು ಸಾರ್ವಜನಿಕ ಸ್ಥಳಗಳಲ್ಲಿ, ರಸ್ತೆ ಬದಿಗಳಲ್ಲಿ ಎಸೆಯುವ ಕಸಗಳಿಂದ ಊರಿನ ಸೌಂದರ್ಯ ಹಾಗೂ ಸ್ವಚ್ಚತೆ ಹಾಳಾಗುತ್ತಿದ್ದು. ಈ ಬಗ್ಗೆ ಗ್ರಾಮ ಪಂಚಾಯಿತಿಯು ರೂಪಿಸಿದ ಸುಂದರ ಮರವಂತೆ ಸ್ವಚ್ಚ ಮರವಂತೆ ಅಭಿಯಾನಕ್ಕೆ ಮಂಗಳವಾರ ಚಾನೆಯನ್ನು ನೀಡಲಾಯಿತು. ಮರವಂತೆಯು ನದಿ ಕಡಲಿನಿಂದ ಆವೃತ್ತವಾದ ಪ್ರಕೃತಿ ರಮ್ಯ ಮನೋಹರ ಪ್ರವಾಸಿ ತಾಣವಾಗಿದೆ. ಇದನ್ನು ಸ್ವಚ್ಚ ಪಡಿಸುವಲ್ಲಿ ಹಾಗೂ ಜನರಲ್ಲಿ ಅರಿವು ಮೂಡಿಸುವಲ್ಲಿ ಪಂಚಾಯಿತಿ ರೂಪಿಸಿದ ಯೋಜನೆಗೆ ಮೆಚ್ಚುಗೆ ವ್ಯಕ್ತವಾಯಿತು.
ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಪಂಚಾಯಿತಿ ಅಧ್ಯಕ್ಷ ನಾಗರಾಜ್ ಅಧ್ಯಕ್ಷತೆಯಲ್ಲಿ ನಡೆದ ಪಂಚಾಯಿತಿ ಸದಸ್ಯರ, ಸಂಘ ಸಂಸ್ಥೆಗಳ ಪ್ರಮುಖರ, ಇಲಾಖೆಗಳ ಅಧಿಕಾರಿಗಳ, ಸಮುದಾಯದ ಹಿರಿಯರ ಸಭೆಯಲ್ಲಿ ಯೋಜನೆಯ ವಿವರಗಳನ್ನು ಕೂಲಂಕುಷವಾಗಿ ಚರ್ಚಿಸಲಾಯಿತು.
ಗ್ರಾಮ ಪಂಚಾಯಿತಿ ಸದಸ್ಯರು, ಅಧಿಕಾರಿಗಳು, ಶಾಲೆಗಳ ಮುಖ್ಯ ಶಿಕ್ಷಕರು, ಆರೋಗ್ಯ ಅಧಿಕಾರಿಗಳು, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಸಾಧನಾ ವೇದಿಕೆ, ಸಂಗಮ ಯುವಕ ಮಂಡಲ, ವರಾಹ ದೇವಸ್ಥಾನ, ರಾಮ ಮಂದಿರ, ಸಂಜೀವಿನಿ ಸಂಸ್ಥೆಗಳ ಪ್ರಮುಖರು, ವಿಶ್ವ ಕರ್ಮ, ಬಿಲ್ಲವ, ದಲಿತ ಸಂಘಟನೆಗಳ ಮುಖಂಡರು, ಕ್ಲೀನ್ ತ್ರಾಸಿ ಮರವಂತೆ, ಕ್ಲೀನ್ ಕಿನಾರ, ಸಾಹಸ್ ಸಂಘಟನೆಗಳ ಕಾರ್ಯಕರ್ತರು, ನಾಗರಿಕರು ಭಾಗವಹಿಸಿದ್ದರು.