
ಕೊಟ್ಟಿಗೆಹಾರ: ಉರ್ದು ಶಾಲೆಯ ನೇತೃತ್ವದಲ್ಲಿ ಬಣಕಲ್ನಲ್ಲಿ ಕ್ರೀಡಾಕೂಟ. ಬಣಕಲ್ ಹಾಗೂ ಬಾಳೂರು ವಲಯ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟವು ಬಣಕಲ್ ಉರ್ದು ಶಾಲೆಯ ನೇತೃತ್ವದಲ್ಲಿ ಬಣಕಲ್ ಪ್ರೌಢಶಾಲೆಯ ಕ್ರೀಡಾಂಗಣದಲ್ಲಿ ಭವ್ಯವಾಗಿ ಆರಂಭವಾಯಿತು. ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಮೀನಾಕ್ಷಿ ಗಿಡಕ್ಕೆ ನೀರು ಹಾಕುವುದರ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಅವರು ಮಾತನಾಡಿ, ಕ್ರೀಡೆ ಕೇವಲ ಆಟವಲ್ಲ, ಅದು ಜೀವನ ಪಾಠ. ಕ್ರೀಡಾಂಗಣದಲ್ಲಿ ಮಕ್ಕಳು ಕಲಿಯುವ ಶಿಸ್ತು, ಪರಿಶ್ರಮ ಹಾಗೂ ಸೋಲಿನಲ್ಲೂ ಗೆಲುವಿನ ಮನೋಭಾವ ಇವು ಬದುಕಿನ ಪಯಣದಲ್ಲಿ ಮಾರ್ಗದರ್ಶಕವಾಗುತ್ತದೆ. ದೈಹಿಕ – ಮಾನಸಿಕ ಆರೋಗ್ಯವನ್ನು ವೃದ್ಧಿಸುವುದರ ಜೊತೆಗೆ ಕ್ರೀಡೆ, ಸ್ನೇಹ, ಸೌಹಾರ್ದತೆ ಮತ್ತು ತಂಡಭಾವನೆ ಬೆಳೆಸುತ್ತದೆ. 1896ರಲ್ಲಿ ಆರಂಭವಾದ ಆಧುನಿಕ ಒಲಂಪಿಕ್ ಕ್ರೀಡೆ ಜಾಗತಿಕ ಕ್ರೀಡಾ ಚಳುವಳಿಗೆ ದಾರಿ ಮಾಡಿಕೊಟ್ಟಿದ್ದು, ನಮ್ಮ ಪಠ್ಯಕ್ರಮದಲ್ಲಿಯೂ ಕ್ರೀಡೆಗೆ ಸೂಕ್ತ ಸ್ಥಾನ ನೀಡಬೇಕು ಎಂದರು.
ಉರ್ದು ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಇದ್ರೀಸ್ ಮಾತನಾಡಿ, ಮಕ್ಕಳ ಭವಿಷ್ಯ ನಿರ್ಮಾಣದಲ್ಲಿ ಕ್ರೀಡೆಗೆ ಮಹತ್ವದ ಪಾತ್ರವಿದೆ. ಪೋಷಕರು ಹಾಗೂ ಶಿಕ್ಷಕರು ಮಕ್ಕಳಿಗೆ ಕ್ರೀಡೆಯಲ್ಲಿ ತೊಡಗಿಸಬೇಕು, ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಉರ್ದು ಶಾಲೆಯ ಶಿಕ್ಷಕಿ ರೇಷ್ಮಾ, ಜಿಲ್ಲಾ ಉರ್ದು ಶಾಲೆಗಳ ಅಧ್ಯಕ್ಷ ಅಸ್ಗರ್ ಆಲಿಖಾನ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜರೀನಾ, ಸದಸ್ಯರು ಅತೀಕ ಬಾನು, ಇರ್ಫಾನ್, ಸಾಹಿತ್ಯ ಪರಿಷತ್ ಹೋಬಳಿ ಅಧ್ಯಕ್ಷ ಲೋಕೇಶ್, ದಿಲ್ದಾರ್ ಬೇಗಂ, ತಾಲ್ಲೂಕು ದೈಹಿಕ ಪರಿವೀಕ್ಷಕ ಶ್ರೀನಿವಾಸ್, ತಾಲ್ಲೂಕು ನೌಕರರ ಸಂಘದ ಉಪಾಧ್ಯಕ್ಷ ಮಂಜಪ್ಪ, ಬಣಕಲ್ ಪ್ರೌಢಾ ಶಾಲೆಯ ಮುಖ್ಯ ಶಿಕ್ಷಕ ಶ್ರೀನಿವಾಸ್, ದೈಹಿಕ ಶಿಕ್ಷಕರು ಪರಮೇಶ್, ಪ್ರವೀಣ್, ಸುಧಾಕರ್ ಹಾಗೂ ಇತರರು, ನಿವೃತ್ತ ಮುಖ್ಯಶಿಕ್ಷಕ ಪಿ. ವಾಸುದೇವ್, ಶಿಕ್ಷಕ ಅಕ್ರಮ್ ಪಾಶ ಇನ್ನೂ ಮುಂತಾದ ಶಿಕ್ಷಕರು ಹಾಗೂ ಅನೇಕ ಕ್ರೀಡಾಭಿಮಾನಿಗಳು ಭಾಗವಹಿಸಿದ್ದರು.
ಉರ್ದುಶಾಲೆಯ ಎಸ್ಡಿಎಂಸಿ ಸದಸ್ಯರ ಸಹಕಾರದಿಂದ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು. ಬಣಕಲ್ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಹಾಗೂ ಸದಸ್ಯರು ಜ್ಯೋತಿ ಹಚ್ಚಿ ಕ್ರೀಡಾಕೂಟಕ್ಕೆ ಚೈತನ್ಯ ತುಂಬಿದರು.