
ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಯುಜಿಸಿಇಟಿ-25 ಅಭ್ಯರ್ಥಿಗಳ ಎಂಜಿನಿಯರಿಂಗ್, ಪಶುವೈದ್ಯಕೀಯ, ಕೃಷಿ, ಬಿಪಿಟಿ, ಎಎಚ್ಎಸ್ ಕೋರ್ಸ್ಗಳ ಪ್ರವೇಶಕ್ಕೆ ಮೊದಲ ಹಂತದ ಸೀಟು ಹಂಚಿಕೆ ಆಯ್ಕೆ ದಾಖಲಿಸಲು ವೆಬ್ ಸೈಟ್ನಲ್ಲಿ (https://cetonline.karnataka.gov.in/kea/) ಲಿಂಕ್ ಬಿಡುಗಡೆ ಮಾಡಲಾಗಿದೆ. ಅಭ್ಯರ್ಥಿಗಳ ದಾಖಲಾತಿಗೆ ಜುಲೈ 15 ರವರೆಗೆ ಅವಕಾಶವಿದ್ದು, ಅಂದೇ ಕೊನೆಯ ದಿನವಾಗಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಅವರು ಅಪ್ಡೇಟ್ ನೀಡಿದ್ದಾರೆ. ವೈದ್ಯಕೀಯ, ದಂತ ವೈದ್ಯಕೀಯ, ಆಯುರ್ವೇದ, ಹೋಮಿಯೋಪತಿ ಮತ್ತು ಯುನಾನಿ, ಬಿಸ್ಸಿ ನರ್ಸಿಂಗ್, ಆರ್ಕಿಟೆಕ್ಚರ್, ಯೋಗ ಮತ್ತು ನ್ಯಾಚುರೋಪತಿ ಕೋರ್ಸಗಳ ಸೀಟ್ ಮ್ಯಾಟ್ರಿಕ್ಸ್, ಸಂಬಂಧಪಟ್ಟ ಇಲಾಖೆಗಳಿಂದ ಇನ್ನೂ ಬಂದಿಲ್ಲ. ಹೀಗಾಗಿ ಮ್ಯಾಟ್ರಿಕ್ಸ್ ಬಂದ ನಂತರ ಈ ಕೋರ್ಸ್ಗಳ ಪ್ರವೇಶಕ್ಕೂ ಆಪ್ಷನ್ಸ್ ದಾಖಲಿಸಲು ಅವಕಾಶ ನೀಡಲಾಗುವುದು ಎಂದಿದ್ದಾರೆ.
ಜುಲೈ 19ರಂದು ಇದೆಲ್ಲದರ ಅಣಕು ಫಲಿತಾಂಶವನ್ನು ವೆಬ್ಸೈಟ್ನಲ್ಲಿ ಪ್ರಕಟಿಸಲಾಗುವುದು. ಅದರ ನಂತರ ಆಧ್ಯತೆಗಳನ್ನು ಅದಲು-ಬದಲು ಮಾಡಿಕೊಳ್ಳಲು ಜುಲೈ 22 ರ ತನಕ ಅವಕಾಶ ನೀಡಲಾಗಿದೆ. ಇನ್ನು ಜುಲೈ 25ರಂದು ಸೀಟು ಹಂಚಿಕೆಯ ಅಂತಿಮ ಫಲಿತಾಂಶ ಪ್ರಕಟಿಸಲಾಗುತ್ತದೆ. ಕೂಡಲೇ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದ ಸೂಚನೆಗಳನ್ನು ಪಾಲಿಸಬೇಕು. ಕೊನೆ ದಿನಾಂಕದವರೆಗೆ ಕಾಯದೇ ಈಗಲೇ ಕಾರ್ಯಪ್ರವೃತ್ತರಾಗಬೇಕಿದೆ. ಅಭ್ಯರ್ಥಿಗಳು ಸೀಟ್ ಮ್ಯಾಟ್ರಿಕ್ಸ್ ನೋಡಿಕೊಂಡು ಇಚ್ಛೆ ಅಥವಾ ಆಯ್ಕೆಗಳನ್ನು ದಾಖಲಿಸುವಾಗ ಆದ್ಯತಾ ಕ್ರಮಗಳನ್ನು ಅನುಸರಿಸಬೇಕು. ಈ ಕುರಿತು ಹೆಚ್ಚಿನ ವಿವರಗಳಿಗೆ ಯುಜಿಸಿಇಟಿ-25 ಸೀಟು ಹಂಚಿಕೆಯ ಮಾಹಿತಿ ಪುಸ್ತಕದಲ್ಲಿ ನೀಡಿರುವ ಸೂಚನೆಗಳನ್ನು ಓದಿಕೊಳ್ಳಬೇಕು. ಅಲ್ಲದೇ ಕೆಇಎ ವಿಕಸನ ಯೂಟ್ಯಬ್ ಚಾನಲ್ನಲ್ಲಿ ಇರುವ ವೀಡಿಯೋ ಕೂಡ ನೋಡಬಹುದು ಎಂದು ಅವರು ತಿಳಿಸಿದರು.
ಪಶು ಸಂಗೋಪನೆ ಮತ್ತು ಪಶು ವೈದ್ಯಕೀಯ, ಕೃಷಿ ವಿಜ್ಞಾನ ಕೋರ್ಸ್ಗಳಲ್ಲಿ ಪ್ರಾಕ್ಟಿಕಲ್ ರ್ಯಾಂಕ್ ಪಡೆದಿರುವ ಅಭ್ಯರ್ಥಿಗಳ, ಪ್ರಾಕ್ಟಿಕಲ್ ಮತ್ತು ರೆಗ್ಯುಲರ್ ಸೀಟುಗಳಿಗೆ ಪ್ರತ್ಯೇಕವಾಗಿಯೇ ಆಪ್ಷನ್ಸ್ ದಾಖಲಿಸಬೇಕು ಎಂಬ ಸೂಚನೆ ಅವರು ನೀಡಿದ್ದಾರೆ.