ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ (PMFBY) ಅನ್ನು ಸಮರ್ಥವಾಗಿ ಅನುಷ್ಠಾನಗೊಳಿಸಿದಕ್ಕಾಗಿ ಕರ್ನಾಟಕ ರಾಜ್ಯವು ರಾಷ್ಟ್ರಮಟ್ಟದಲ್ಲಿ ಎರಡನೇ ಸ್ಥಾನ ಗಳಿಸಿದ್ದು, ಈ ಮಹತ್ವದ ಸಾಧನೆಗೆ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದಿಂದ ಪ್ರಶಂಸೆ ಹಾಗೂ ಪ್ರಶಸ್ತಿ ಲಭಿಸಿದೆ. 2024–25ನೇ ಸಾಲಿನಲ್ಲಿ ಯೋಜನೆಯಡಿ ರಾಜ್ಯದಲ್ಲಿ 27 ಲಕ್ಷಕ್ಕೂ ಹೆಚ್ಚು ರೈತರು ನೋಂದಣಿ ಮಾಡಿಕೊಂಡಿದ್ದು, ನೈಸರ್ಗಿಕ ವಿಕೋಪಗಳು ಹಾಗೂ ಹವಾಮಾನ ವೈಪರೀತ್ಯಗಳಿಂದ ಬೆಳೆ ನಷ್ಟ ಅನುಭವಿಸಿದ 11 ಲಕ್ಷಕ್ಕೂ ಅಧಿಕ ರೈತರಿಗೆ ಒಟ್ಟು 2,094 ಕೋಟಿ ರೂ. ವಿಮಾ ಪರಿಹಾರವನ್ನು ಸಮಯಕ್ಕೆ ಸರಿಯಾಗಿ ವಿತರಿಸಲಾಗಿದೆ. ಕಡಿಮೆ ಪ್ರೀಮಿಯಂ ದರದಲ್ಲಿ ರೈತರಿಗೆ ಸಮಗ್ರ ಬೆಳೆ ವಿಮಾ ರಕ್ಷಣೆ ಒದಗಿಸುವ ಈ ಯೋಜನೆಯ ಪರಿಣಾಮಕಾರಿ ಜಾರಿಯಿಂದ ರೈತರ ಆದಾಯ ರಕ್ಷಣೆ ಹಾಗೂ ಆರ್ಥಿಕ ಭದ್ರತೆ ಸಾಧ್ಯವಾಗಿದ್ದು, ರಾಜ್ಯ ಸರ್ಕಾರದ ರೈತಪರ ನೀತಿಗಳು ಮತ್ತೊಮ್ಮೆ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿವೆ.
