ಬೆಂಗಳೂರು: 2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1 ಫಲಿತಾಂಶ ಪ್ರಕಟವಾಗಿದ್ದು, ಲಕ್ಷಾಂತರ ವಿದ್ಯಾರ್ಥಿಗಳ ಕಾಯುವಿಕೆ ಅಂತ್ಯವಾಗಿದೆ. ಈ ಬಾರಿ ಮೊದಲು ಆನ್ಲೈನ್ನಲ್ಲಿ ಫಲಿತಾಂಶ ಬಿಡುಗಡೆ ಮಾಡಲಾಗಿದ್ದು, ಬಳಿಕ ಸಂಜೆ 6ಕ್ಕೆ ಮಲ್ಲೇಶ್ವರಂನ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಕಚೇರಿಯಲ್ಲಿ ಶಿಕ್ಷಣ ಸಚಿವ ಮಧುಬಂಗಾರಪ್ಪ ಅವರು ಸುದ್ದಿಗೋಷ್ಠಿ ನಡೆಸಲಿದ್ದಾರೆ. ವಿದ್ಯಾರ್ಥಿಗಳು https://karresults.nic.in ವೆಬ್ಸೈಟ್ ಮೂಲಕ ರಿಜಿಸ್ಟ್ರೇಶನ್ ನಂಬರ್ ಮತ್ತು ಜನ್ಮ ದಿನಾಂಕ ನಮೂದಿಸಿ ತಮ್ಮ ಫಲಿತಾಂಶ ವೀಕ್ಷಿಸಬಹುದಾಗಿದೆ. ಫೆಬ್ರವರಿ 28ರಿಂದ ಮಾರ್ಚ್ 12ರವರೆಗೆ 1217 ಕೇಂದ್ರಗಳಲ್ಲಿ ನಡೆದ ಪರೀಕ್ಷೆಗೆ ಸುಮಾರು 7.10 ಲಕ್ಷ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, ಇದರಲ್ಲಿ ಸೈನ್ಸ್ 2.92 ಲಕ್ಷ, ವಾಣಿಜ್ಯ 2.11 ಲಕ್ಷ ಮತ್ತು ಕಲಾ ವಿಭಾಗದ 1.42 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದಾರೆ. ಸರ್ವರ್ ಸಮಸ್ಯೆ ಎದುರಾದರೆ ಡಿಜಿಲಾಕರ್ (https://www.digilocker.govt.in), ಕರ್ನಾಟಕ ಒನ್ ಮೊಬೈಲ್ ಆ್ಯಪ್ ಹಾಗೂ SMS ಮೂಲಕವೂ ಫಲಿತಾಂಶ ಪಡೆಯುವ ಅವಕಾಶ ಕಲ್ಪಿಸಲಾಗಿದೆ. ಈ ವರ್ಷ ಪ್ರಥಮ ಬಾರಿಗೆ ಡಿಜಿಲಾಕರ್ನಲ್ಲಿ ಅಂಕಪಟ್ಟಿ ಲಭ್ಯವಾಗುತ್ತಿದ್ದು, ವಿದ್ಯಾರ್ಥಿಗಳು ಸುಲಭವಾಗಿ ಹಾಗೂ ವೇಗವಾಗಿ ತಮ್ಮ ಮಾರ್ಕ್ಸ್ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳಬಹುದು.
