
ಕೊಟ್ಟಿಗೆಹಾರ: ಲೇಖಕರಾದ ಡಾ. ಪ್ರದೀಪ್ ಕೆಂಜಿಗೆ ಅವರ ‘ನರವಾನರ’ ಕೃತಿಗೆ ಕನ್ನಡ ಸಾಹಿತ್ಯ ಅಕಾಡೆಮಿಯಿಂದ ನೀಡುವ ಅತ್ಯುತ್ತಮ ಪುಸ್ತಕ ಪ್ರಶಸ್ತಿ ಲಭಿಸಿದೆ. 2024ರಲ್ಲಿ ಪ್ರಕಟವಾದ ವಿವಿಧ 17 ಸಾಹಿತ್ಯ ಪ್ರಕಾರಗಳ ಕೃತಿಗಳಲ್ಲಿ ವಿಮರ್ಶಕರ ಅಭಿಪ್ರಾಯ ಆಧರಿಸಿ ಸಂಕೀರ್ಣ ವಿಭಾಗದಲ್ಲಿ ಈ ಕೃತಿಯನ್ನು ಅತ್ಯುತ್ತಮವೆಂದು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯೊಂದಿಗೆ ₹25 ಸಾವಿರ ನಗದು ಬಹುಮಾನ, ಫಲಕ ಮತ್ತು ಪ್ರಮಾಣಪತ್ರ ನೀಡಲಾಗುತ್ತದೆ. ‘ನರವಾನರ’ ಕೃತಿ ಚಿಂಪಾಂಜಿಗಳ ನಡವಳಿಕೆ, ಜೀವನವಿಧಾನ ಸೇರಿದಂತೆ ವೈಜ್ಞಾನಿಕ ಅಂಶಗಳನ್ನು ವಿಶ್ಲೇಷಿಸಿ ಜೀವ ವಿಜ್ಞಾನ ಸಂಶೋಧನೆಗಳನ್ನು ಹಾಗೂ ಹಲವಾರು ವಿಸ್ಮಯಕಾರಿ ಸಂಗತಿಗಳನ್ನು ಮನಮುಟ್ಟುವಂತೆ ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಡಾ. ಕೆಂಜಿಗೆ ಅವರು ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರೊಂದಿಗೆ ಪ್ಯಾಪಿಲಾನ್ ಮತ್ತು ವಿಸ್ಮಯ ಸರಣಿಯ ಕೃತಿಗಳನ್ನು ರಚಿಸಿದ್ದು, ಪ್ಯಾಪಿಯೋನ್-3, ಬರ್ಮುಡಾ ಟ್ರೈಯಾಂಗಲ್, ಅದ್ಭುತಯಾನ, ಹೆಬ್ಬಾವಿನೊಡನೆ ಹೋರಾಟ ಸೇರಿದಂತೆ ಹಲವು ಕೃತಿಗಳನ್ನು ಪ್ರಕಟಿಸಿದ್ದಾರೆ. ಪಶ್ಚಿಮಘಟ್ಟಗಳ ಜೀವ ವೈವಿಧ್ಯತೆ ಹಾಗೂ ಕ್ರಿಮಿನಾಶಕಗಳ ದುಷ್ಪರಿಣಾಮಗಳ ಅಧ್ಯಯನದಲ್ಲಿ ಪಿಎಚ್ಡಿ ಪಡೆದಿರುವ ಅವರು, ಕೆಫೆ ಕಾಫಿ ಡೇ ಸಂಸ್ಥೆಯ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಮುಖ್ಯ ವಿಜ್ಞಾನಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಅಧ್ಯಕ್ಷರಾಗಿದ್ದಾರೆ.




