
ಜಯಪುರ: ನಾಡಪ್ರಭು ಕೆಂಪೇಗೌಡರು ಈ ದೇಶ ಕಂಡ ಅಪ್ರತಿಮೆ ಹೋರಾಟಗಾರ ಹಾಗೂ ದೂರದೃಷ್ಟಿ ಹೊಂದಿದ್ದ ಆಡಳಿತಗಾರರಾಗಿದ್ದು. ಕರ್ನಾಟಕ ರಾಜ್ಯ ಜಗತ್ತಿನಾದ್ಯಂತ ಹೆಸರು ಮಾಡಲು ಮೂಲ ಕಾರಣೀಕರ್ತರಾಗಿದ್ದಾರೆ ಎಂದು ಯುವ ಒಕ್ಕಲಿಗ ವೇದಿಕೆಯ ಗೌರವಾಧ್ಯಕ್ಷ ಕಿಬ್ಳಿ ಪ್ರಸನ್ನ ಕುಮಾರ್ ಹೇಳಿದರು.
ಹೆರೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ದೂಬ್ಲ ಕೈಮರ ವೃತ್ತದಲ್ಲಿ ಹೆರೂರು ಯುವ ಒಕ್ಕಲಿಗ ವೇದಿಕೆಯ ವತಿಯಿಂದ ಆಚರಿಸಿದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 1510ರಲ್ಲಿ ಜನಿಸಿದ ಕೆಂಪೇಗೌಡರು ಸುಮಾರು 500 ವರ್ಷಗಳ ಹಿಂದೆಯೇ ಬೆಂಗಳೂರಿನಂಥ ಬೃಹತ್ ನಗರದ ನಿರ್ಮಾಣ ಮಾಡಿ, ಸುಸಜ್ಜಿತ ರಾಜಕಾಲುವೆ, ನೀರಿನ ವ್ಯವಸ್ಥೆ, ಉದ್ಯಾನವನ ಮಾರುಕಟ್ಟೆಗಳನ್ನು, ದೇವಸ್ಥಾನ ಸೇರಿದಂತೆ ಎಲ್ಲಾ ಅವಶ್ಯಕತೆಗಳನ್ನು ರೂಪಿಸಿದ್ದರು. ಅವರೊಬ್ಬ ಅತ್ಯದ್ಭುತ ಇಂಜಿನೀಯರ್, ಅತ್ಯದ್ಭುತ ಮಾರುಕಟ್ಟೆ ಪರಿಣಿತ, ಅತ್ಯದ್ಭುತ ಸಮಾಜ ಸುಧಾರಕ, ಅತ್ಯದ್ಭುತ ನೀರಾವರಿ ತಜ್ಞ, ಅತ್ಯದ್ಭುತ ಆಡಳಿತಗಾರ ಆಗಿದ್ದರು.
ಕೆಂಪೇಗೌಡರಂತಹ ಮಹಾನ್ಸಾದಕರ ವಂಶದಲ್ಲಿ ಒಕ್ಕಲಿಗರಿಗಾಗಿ ಜನಿಸಿರುವ ನಾವುಗಳು ಹೆಮ್ಮೆ ಪಡಬೇಕಾಗಿದ್ದು, ಅವರ ಜೀವನದ ಆದರ್ಶಗಳಾದ ಪರೋಪಕಾರ, ಸಮಾಜ ಬಗೆಗಿನ ನಮ್ಮ ನೆಲದ ಬಗೆಗಿನ ಪ್ರೀತಿ, ದೀನ ದಲಿತರ ಬಗೆಗಿನ ಕಾಳಜಿಯನ್ನು ನಾವು ಅಳವಡಿಸಿಕೊಳ್ಳಬೇಕು ಎಂದರು. ಕಾರ್ಯಕ್ರಮದ ನಂತರ ಕೆಂಪೇಗೌಡರ ಸ್ಮರಣಾರ್ಥ ಸಂಘದ ವತಿಯಿಂದ ಕೊಪ್ಪದ ಸರ್ಕಾರಿ ಆಸ್ಪತ್ರೆಯಲ್ಲಿರುವ ೮೦ ಒಳ ರೋಗಿಗಳಿಗೆ ಹಣ್ಣು ಮತ್ತು ಬ್ರೆಡ್, ಬಿಸ್ಕೆಟ್ ಹಾಗೂ ಸಣ್ಣ ಮಕ್ಕಳಿಗೆ ಪ್ಯಾಂಪರ್ಸ್ ಸೇರಿದಂತೆ ಹಾಗೂ ಎನ್ಆರ್ಪುರದ ಅನಾಥಾಶ್ರಮದಲ್ಲಿರುವ ೧೦೦ ಅನಾಥ ಸಹೋದರ, ಸಹೋದರಿಯರಿಗೆ ಟವೆಲ್, ಹಣ್ಣು ಹಾಗೂ ಧನ ಸಹಾಯ ಮಾಡಲಾಯಿತು. ೬೬೬ ಒಕ್ಕಲಿಗ ಸಂಘದ ಜಿಲ್ಲಾ ನಿರ್ದೇಶಕ ಪೃಥ್ವಿರಾಜ್ ಕೌರಿ, ಹೇರೂರು ಯುವ ಒಕ್ಕಲಿಗ ವೇದಿಕೆಯ ಅಧ್ಯಕ್ಷ ವಿಜೇಂದ್ರ, ಕಾರ್ಯದರ್ಶಿ ವರುಣ್, ಖಜಾಂಚಿ ನಿರೀಕ್ಷಿತ್, ವಕೀಲರಾದ ರಜತ್, ಸಾಹಿತಿ ರವಿಕಾಂತ್, ಪ್ರಮುಖರಾದ ನಾಗರಾಜ್, ರಕ್ಷಿತ್, ರತೀಶ್ ಹಾಗೂ ಹೇರೂರು ಯುವ ಒಕ್ಕಲಿಗ ವೇದಿಕೆಯ ಸದಸ್ಯರುಗಳಿದ್ದರು