
ಖಾಲಿ ಹೊಟ್ಟೆಯಲ್ಲಿ ಹಣ್ಣು ತಿನ್ನುವ ಅಭ್ಯಾಸ ಆರೋಗ್ಯಕ್ಕೆ ಲಾಭಕರವೇ ಎಂಬ ಪ್ರಶ್ನೆಗೆ ತಜ್ಞರು ಸ್ಪಷ್ಟನೆ ನೀಡಿದ್ದು, ಬೆಳಿಗ್ಗೆ ಹಣ್ಣು ಸೇವಿಸುವುದು ಸಾಮಾನ್ಯವಾಗಿ ಒಳ್ಳೆಯದಾಗಿದ್ದರೂ ಹಣ್ಣಿನ ಆಯ್ಕೆ ಮಹತ್ವದ್ದಾಗಿದೆ ಎಂದು ತಿಳಿಸಿದ್ದಾರೆ. ಸೇಬು, ಪಪ್ಪಾಯಿ, ಕರಬೂಜ್ ಹಣ್ಣುಗಳನ್ನು ಖಾಲಿ ಹೊಟ್ಟೆಯಲ್ಲಿ ತಿನ್ನುವುದು ಜೀರ್ಣಕ್ರಿಯೆಗೆ ಸಹಾಯಕವಾಗಿದ್ದು, ದೇಹಕ್ಕೆ ತಕ್ಷಣ ಶಕ್ತಿ ಹಾಗೂ ಅಗತ್ಯ ಪೋಷಕಾಂಶಗಳನ್ನು ನೀಡುತ್ತದೆ. ಆದರೆ ಬಾಳೆಹಣ್ಣು ಮತ್ತು ಕಿತ್ತಳೆ ಹಣ್ಣುಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದು, ವಿಶೇಷವಾಗಿ ಅಜೀರ್ಣ ಅಥವಾ ಆಸಿಡ್ ಸಮಸ್ಯೆ ಇರುವವರಿಗೆ, ಹೊಟ್ಟೆ ಕಿರಿಕಿರಿ ಉಂಟುಮಾಡುವ ಸಾಧ್ಯತೆ ಇದೆ. ಹೀಗಾಗಿ ಎಲ್ಲರಿಗೂ ಈ ವಿಧಾನ ಸೂಕ್ತವಲ್ಲ ಎಂದು ತಜ್ಞರು ಎಚ್ಚರಿಸಿದ್ದಾರೆ. ಹಣ್ಣುಗಳನ್ನು ತಾಜಾ ರೂಪದಲ್ಲೇ ತಿನ್ನುವುದು ಹೆಚ್ಚು ಲಾಭಕರವಾಗಿದ್ದು, ಜ್ಯೂಸ್ ಮಾಡುವುದನ್ನು ತಪ್ಪಿಸುವುದು ಉತ್ತಮ. ಜೊತೆಗೆ ಒಂದೇ ವೇಳೆ ವಿವಿಧ ಹಣ್ಣುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಮಿಶ್ರಣ ಮಾಡಿ ತಿನ್ನುವುದು ಹಾಗೂ ಹಣ್ಣು ತಿಂದ ತಕ್ಷಣವೇ ಊಟ ಮಾಡುವುದನ್ನು ತಪ್ಪಿಸುವುದು ಆರೋಗ್ಯದ ದೃಷ್ಟಿಯಿಂದ ಒಳಿತು ಎಂದು ಸಲಹೆ ನೀಡಿದ್ದಾರೆ.




