ಬೆಂಗಳೂರು: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ರಾಜ್ಯದ 6,670ಕ್ಕೂ ಅಧಿಕ ಸರ್ಕಾರಿ ಶಾಲೆಗಳಲ್ಲಿ ಕೇವಲ ಒಬ್ಬರೇ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದು, ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ 1,263ರಷ್ಟು ಹೆಚ್ಚಳವಾಗಿದೆ. ರಾಜ್ಯದಲ್ಲಿ ಒಟ್ಟು ಸುಮಾರು 49,000ಕ್ಕೂ ಅಧಿಕ ಸರ್ಕಾರಿ ಶಾಲೆಗಳಿದ್ದು, ಹಾಸನ ಮತ್ತು ತುಮಕೂರು ಜಿಲ್ಲೆಗಳಲ್ಲಿ ಏಕೋಪಾಧ್ಯಾಯ ಶಾಲೆಗಳ ಸಂಖ್ಯೆ ಹೆಚ್ಚಾಗಿದೆ. ಕೆಲವು ಶಾಲೆಗಳಲ್ಲಿ 30ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿದ್ದರೂ, ಒಬ್ಬ ಶಿಕ್ಷಕನೇ 1ರಿಂದ 5ನೇ ತರಗತಿಗಳವರೆಗೆ ಪಾಠ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಎಲ್ಲ ತರಗತಿಗಳನ್ನು ಒಬ್ಬರೇ ನಿರ್ವಹಿಸುವುದು ಕಷ್ಟಕರವಾಗಿದ್ದು, ಇದರ ಪರಿಣಾಮವಾಗಿ ಮಕ್ಕಳ ಕಲಿಕೆಯ ಗುಣಮಟ್ಟ ಕುಸಿಯುವ ಆತಂಕ ವ್ಯಕ್ತವಾಗಿದೆ. ಇತ್ತ, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ರಾಜ್ಯದ 180ಕ್ಕೂ ಅಧಿಕ ಸರ್ಕಾರಿ ಶಾಲೆಗಳಲ್ಲಿ ಒಂದೂ ದಾಖಲಾತಿಯಾಗಿಲ್ಲ ಎಂದು ಸರ್ಕಾರದ ಅಂಕಿಅಂಶಗಳು ತಿಳಿಸಿವೆ.
