ಶೃಂಗೇರಿ: ತಾಲ್ಲೂಕಿನ ಕಿಗ್ಗಾ ಗ್ರಾಮದ ಮಾಗಲು–ಹೊಸಕೊಪ್ಪ ರಸ್ತೆಯಲ್ಲಿ ಪಶುಗಳನ್ನು ಹಿಂಸಾತ್ಮಕವಾಗಿ ಸಾಗಣೆ ಮಾಡುತ್ತಿದ್ದ ಘಟನೆ ಬೆಳಕಿಗೆ ಬಂದಿದ್ದು, ಈ ಸಂಬಂಧ ನಾಲ್ವರು ಆರೋಪಿಗಳ ವಿರುದ್ಧ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾರ್ಚ್ 24ರಂದು ಬೆಳಿಗ್ಗೆ ಸುಮಾರು 11.40ರ ವೇಳೆಗೆ ಗಸ್ತಿನಲ್ಲಿದ್ದ ಪೊಲೀಸ್ ಸಿಬ್ಬಂದಿಗೆ ಬಂದ ಮಾಹಿತಿ ಆಧರಿಸಿ ಸ್ಥಳಕ್ಕೆ ತೆರಳಿದಾಗ KA35 C 7819 ಸಂಖ್ಯೆಯ ಅಶೋಕ್ ಲೇಲ್ಯಾಂಡ್ ಗೂಡ್ಸ್ ವಾಹನದಲ್ಲಿ ಒಂದು ಎಮ್ಮೆ ಮತ್ತು ಒಂದು ಕೋಣವನ್ನು ಗಾಳಿ–ಬೆಳಕು ಇಲ್ಲದೆ ತುಂಬಿಕೊಂಡು ಸಾಗಿಸುತ್ತಿರುವುದು ಪತ್ತೆಯಾಗಿದ್ದು, ವಿಚಾರಣೆ ವೇಳೆ ಚಾಲಕ ಅಭೀಷೇಕ್ ಹಾಗೂ ಸಹಚರ ಕೃಷ್ಣ ಅವರು, ಮಾಗೋಡು ಮಂಜುನಾಥ್ ಎಂಬುವವರ ಮನೆಯಿಂದ ಹೊಸಕೊಪ್ಪ ಚೇತನ್ ರವರು ನಮಗೆ ಕೊಡಿಸಿರುವುದಾಗಿ ತಿಳಿಸಿದ್ದಾರೆ. ಆದರೆ ಖರೀದಿಗೆ ಸಂಬಂಧ ಪಟ್ಟ ಯಾವುದೇ ಪರವಾನಗಿ ದಾಖಲೆಗಳನ್ನು ಹೊಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಪಶು ಕ್ರೂರತೆ ತಡೆ ಕಾಯ್ದೆ 1960ರ ಕಲಂ 11(1)(d) ಮತ್ತು ಭಾರತೀಯ ಮೋಟಾರು ವಾಹನ ಕಾಯ್ದೆ 1988ರ ಕಲಂ 192(A) ಅಡಿಯಲ್ಲಿ ಪ್ರಕರಣ ದಾಖಲಿಸಿ, ಪಶುಗಳನ್ನು ಹಾಗೂ ವಾಹನವನ್ನು ವಶಕ್ಕೆ ಪಡೆದು ಮುಂದಿನ ತನಿಖೆ ಕೈಗೊಳ್ಳಲಾಗಿದೆ. ಒಟ್ಟಿನಲ್ಲಿ ಮಲೆನಾಡಿನಲ್ಲಿ ಗೋ ಸಾಕುವವರೇ ಹೀಗೆ ಅಕ್ರಮ ಗೋ ಸಾಗಾಟ ನಡೆಸುತ್ತಿರುವುದು ದುಃಖಕರ ಸಂಗತಿ.
