ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಪ್ರಸಿದ್ಧ ‘ರಾಣಿ ಝರಿ’ ವ್ಯೂ ಪಾಯಿಂಟ್ನಲ್ಲಿ ಅರಣ್ಯ ಇಲಾಖೆಯ ಟಿಕೆಟ್ ವಸೂಲಿ ನಿರ್ಧಾರಕ್ಕೆ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಪ್ರವಾಸಿಗರಿಂದ ಶುಲ್ಕ ವಿಧಿಸುವ ಕ್ರಮದ ವಿರುದ್ಧ ನೂರಾರು ಗ್ರಾಮಸ್ಥರು ಧರಣಿ ನಡೆಸಿ, ಪ್ರಕೃತಿ ಸೌಂದರ್ಯ ಸವಿಯುವುದಕ್ಕೆ ಟಿಕೆಟ್ ಬೇಡ ಎಂದು ಘೋಷಣೆ ಕೂಗಿದರು. ಈಗಾಗಲೇ ‘ಬಂಡಾಜೆ ಜಲಪಾತ’ದಲ್ಲಿ ಶುಲ್ಕ ವಸೂಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ, ರಾಣಿ ಝರಿಗೂ ಟಿಕೆಟ್ ಜಾರಿಗೆ ಯತ್ನಿಸುತ್ತಿರುವುದರಿಂದ ಆಕ್ರೋಶ ಹೆಚ್ಚಾಗಿದೆ. ಇದರಿಂದ ಪ್ರವಾಸಿಗರ ಸಂಖ್ಯೆ ಕುಗ್ಗಿ ಸ್ಥಳೀಯರ ಆದಾಯಕ್ಕೆ ಹೊಡೆತ ಬೀಳುವ ಆತಂಕ ವ್ಯಕ್ತಪಡಿಸಿ, ಸುತ್ತಮುತ್ತಲಿನ ಗ್ರಾಮಸ್ಥರು ಅರಣ್ಯ ಇಲಾಖೆಯ ಕ್ರಮ ಹಿಂಪಡೆಯಲು ಒತ್ತಾಯಿಸಿದ್ದಾರೆ.
