
ಹೊಸನಗರ: ಬಿದನೂರು ಕೋಟೆಯು ಹೊಸನಗರ ತಾಲ್ಲೂಕಿನ ಐತಿಹಾಸಕ ಕೋಟೆಯಾಗಿದೆ. ಕೋಟೆಯ ಮಹಾದ್ವಾರದಿಂದ ಒಳಗೆ ಹೋಗಿ ರಾಜದರ್ಬಾರ್ ಅಂಗಳಕ್ಕೆ ತೆರಳುವಾಗ ಬಲ ಬದಿಯಲ್ಲಿ ಎರಡು ಕೊಳಗಳಿದ್ದು ಅದರಲ್ಲಿ ಒಂದು ಕೊಳದ ದಂಡೆ ಕುಸಿದಿದೆ. ಹಲವು ವರ್ಷಗಳ ಹಿಂದೆ ಕೊಳದ ದಂಡೆಯು ಕುಸಿದಿದ್ದು ಅದನ್ನು ಜಂಬಿಟ್ಟಿಗೆಯಿಂದ ಅದೇ ಮಾದರಿಯಂತೆ ದಂಡೆಯನ್ನು ನಿರ್ಮಿಸಲಾಗಿತ್ತು. ಆದರೆ ಇದೀಗ ಮತ್ತೆ ಅದೇ ಕೊಳದ ದಂಡೆ ಕುಸಿದಿದೆ. ಕೊಳದ ದಂಡೆಗಳಲ್ಲಿ ಹಾಗೂ ಭಾರೀ ಗೋಡೆಗಳ ಮೇಲೆ ಗಿಡಗಳು, ಪಾಚಿ ಕಟ್ಟಿಕೊಂಡಿದ್ದು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡದ ಕಾರಣ ಕೊಳದ ದಂಡೆ ಕುಸಿದಿದೆ ಎನ್ನಲಾಗಿದೆ. ಕೇಂದ್ರ ಪುರಾತತ್ವ ಇಲಾಖೆಯು ನಿರ್ಲಕ್ಷ್ಯ ತೋರುತ್ತಿರುವುದು ಬಹಳ ಬೇಸರದ ಸಂಗತಿಯಾಗಿದೆ. ಸ್ಥಳೀಯರು ಪುರಾತನ ಮಾದರಿಯಲ್ಲೆ ಮತ್ತೆ ಕುಸಿದಿರುವ ಕೊಳದ ದಂಡೆಗಳನ್ನು ನಿರ್ಮಿಸಬೇಕೆಂದು ಒತ್ತಾಯಿಸಿದ್ದಾರೆ.