
ಉಡುಪಿ: ರಾಜ್ಯ ಗೃಹ ಸಚಿವರಾದ ಡಾ. ಪರಮೇಶ್ವರ್ ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ಪ್ರಸಿದ್ಧ ಬೆಳ್ಮಣ್ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ಮಹಾ ಚಂಡಿಕಾ ಹೋಮ ಸೇವೆಯನ್ನು ಕೊಟ್ಟಿದ್ದರು. ಅದರ ಪೂರ್ಣಾಹುತಿಯಲ್ಲಿ ಸಚಿವರು ದಂಪತಿ ಸಮೇತರಾಗಿ ಭಾಗವಹಿಸಿದ್ದರು. ಕ್ಷೇತ್ರದ ಆಡಳಿತ ಮೊಕ್ತೇಸರ ವೇದಮೂರ್ತಿ ಬಿ.ವಿಘ್ನೇಶ್ ಭಟ್ರವರ ನೇತೃತ್ವದಲ್ಲಿ ವಿಶೇಷ ಪೂಜೆ ಮಹಾ ಚಂಡಿಕಾಯಾಗ, ಅನ್ನಸಂತರ್ಪಣೆ ನೆರವೇರಿತು.
ಜನ ಕಲ್ಯಾಣ ಹಾಗೂ ಲೋಕ ಕಲ್ಯಾಣಾರ್ಥವಾಗಿ ಪೂಜೆ ನಡೆಸಲಾಗಿದೆ ಎಂದು ಪ್ರಸಾದ ಸ್ವೀಕರಿಸಿದ ಬಳಿಕ ಪರಮೇಶ್ವರ್ ತಿಳಿಸಿದರು. ಇತ್ತೀಚಿತ ದಿನಗಳಲ್ಲಿ ಮಂಗಳೂರು ಭಾಗದಲ್ಲಿ ಕೊಲೆಗಳು ನಡೆಯುತ್ತಿದ್ದು, ವಿಶೇಷ ತಂಡವನ್ನು ರಚನೆ ಮಾಡಲಾಗಿದೆ. ಅದಲ್ಲದೇ ಕೆಲವು ಅಧಿಕಾರಿಗಳನ್ನು ಬದಲಾಯಿಸಲಾಗಿದೆ. ಬುಧವಾರ ಮಂಗಳೂರಿನಲ್ಲಿ ಶಾಂತಿ ಸಭೆ ನಡೆಸಲು ತೀರ್ಮಾನ ಮಾಡಲಾಗಿದೆ ಎಂದು ಸಚಿವರು ಹೇಳಿದರು.
2011ರಲ್ಲಿ ರಾಜ್ಯ ಕಾಂಗ್ರೆಸ್ನ ಅಧ್ಯಕ್ಷರಾಗಿದ್ದಾಗ ಕರ್ನಾಟಕದಲ್ಲಿ ನಮ್ಮ ಸರ್ಕಾರ ಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬರಬೇಕು ಎಂದು ಪ್ರಾರ್ಥಿಸಿದ್ದೆ. ಅದರಂತಯೇ 2013ರಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂತು ಎಂದು ಗೃಹ ಸಚಿವರು ಹೇಳಿದ್ದಾರೆ. ಕೆಪಿಸಿಸಿ ಅಧ್ಯಕ್ಷನಾಗಿದ್ದಾಗ ಹದಿನಾಲ್ಕು ವರ್ಷಗಳ ಹಿಂದೆ ಬೆಳ್ಮಣ್ ಕ್ಷೇತ್ರಕ್ಕೆ ಭೇಟಿ ನೀಡಿರುವುದಾಗಿ ತಿಳಿಸಿದ್ದಾರೆ.
ಘಟ್ಟದ ಮೇಲಿನ ನಮಗೆ ಕರಾವಳಿ ಪ್ರದೇಶ ಎಂದರೆ ವಿಶೇಷ ಗೌರವವಿದೆ ಆದರೆ ಇತ್ತೀಚಿನ ದಿನಗಳಲ್ಲಿ ಗೌರವಕ್ಕೆ ದಕ್ಕೆ ಬರುವ ರೀತಿಯಲ್ಲಿದೆ. ಇದು ಶಾಶ್ವತವಾಗಿ ಉಳಿಯುವುದಿಲ್ಲ ಶಾಂತಿ ಸಭೆಯ ಬಳಿಕ ಇಲ್ಲಿ ಮರುಶಾಂತಿ ಸ್ಥಾಪನೆಗೋಳ್ಳಲಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳು ರಾಜ್ಯಕ್ಕೆ ಹೆಮ್ಮೆ ತಂದು ಕೊಡುವ ಶೈಕ್ಷಣಿಕ ಹಾಗೂ ಧಾರ್ಮಿಕ ಕೇಂದ್ರಗಳು ಎಂದು ಗೃಹ ಸಚಿವರು ಹೇಳಿದ್ದಾರೆ. ತಾಯಿಯಲ್ಲಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಲು ಬಂದಿದ್ದೇನೆ, ಎಲ್ಲರಿಗೂ ಒಳ್ಳೆಯದನ್ನು ಮಾಡು ತಾಯಿ ಎಂದು ಬೇಡಿಕೊಂಡಿದ್ದೇನೆ. ಇದರಲ್ಲಿ ನಾನು ಕೂಡ ಸ್ವಾಭಾವಿಕವಾಗಿದ್ದೇನೆ ಎಂದು ಸಚಿವರು ತಿಳಿಸಿದರು.