
ಹಾಸನ: ಹಾಸನಾಂಬ ದೇವಿಯ ಜಾತ್ರಾ ಮಹೋತ್ಸವಕ್ಕೆ ಬರುವ ಭಕ್ತರಿಗೆ ಸುಗಮ ವ್ಯವಸ್ಥೆ ಮಾಡಿಕೊಡಬೇಕೆಂದು ಜಿಲ್ಲಾಧಿಕಾರಿ ಲತಾ ಕುಮಾರಿಯವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಾಸನಾಂಬ ದೇವಿಯ ಜಾತ್ರಾ ಮಹೋತ್ಸವ ಸಿದ್ಧತೆ ಕುರಿತು ಪೂರ್ವಾಭಾವಿ ಸಭೆಯಲ್ಲಿ ಮಾತನಾಡಿದರು.
ಒಂದು ದಿನಕ್ಕೆ ಎಷ್ಟು ಭಕ್ತಾದಿಗಳು ದೇವಿಯ ದರ್ಶನಕ್ಕೆ ಬರುತ್ತಾರೆ ಎಂದು ಪರಿಗಣಿಸಿ ಬ್ಯಾರಿಕೇಡ್ ವ್ಯವಸ್ಥೆಯನ್ನು ಮಾಡಬೇಕೆಂದು ಸೂಚಿಸಿದರು. ಅರ್ಚಕರಿಂದ ಮಾಹಿತಿ ಪಡೆದುಕೊಂಡು ಭಕ್ತಾಧಿಗಳಿಗೆ ದೇವಿಯ ದರ್ಶನಕ್ಕೆ ಹೆಚ್ಚಿನ ಸಮಯ ಒದಗಿಸಲು ಅವಕಾಶ ಮಾಡಿಕೊಡಬೇಕು.
ಸುರಕ್ಷತೆ, ಕುಡಿಯುವ ನೀರು, ಸಾರ್ವಜನಿಕರ ಶೌಚಾಲಯ ನಿರ್ವಹಣೆ ಮತ್ತು ಸ್ವಚ್ಚತೆಗೆ ಮೊದಲ ಆದ್ಯತೆ ನೀಡಬೇಕು. ಸಮವಸ್ತ್ರ ಧರಿಸಬೇಕು. ಸ್ವಚ್ಚತೆ ಸಮಯದಲ್ಲಿ ಕಾರ್ಮಿಕರು ಸುರಕ್ಷತಾ ಪರಿಕರಗಳನ್ನು ಬಳಸುವಂತೆ ನೋಡಿಕೊಳ್ಳಬೇಕು ಎಂದರು. ಹೂವಿನ ಅಲಂಕಾರದಲ್ಲಿ ಕಳೆದ ಮೂರು ವರ್ಷಗಳಲ್ಲಿ ಮಾಡಿರುವ ಅಲಂಕಾರ ಪುನಾರಾವರ್ತನೆಯಾಗದಂತೆ ನಿಗಾವಹಿಸಬೇಕು. ದೇವಸ್ಥಾನದ ಆವರಣದಲ್ಲಿ ಹಾಗೂ ನಗರದ ವೃತ್ತದಲ್ಲಿ ಎಲ್.ಇ.ಡಿ ಮೂಲಕ ನೇರ ಪ್ರಸಾರ ಮಾಡುವ ಸಂದರ್ಭದಲ್ಲಿ ಜನಸಂದಣಿ ಮತ್ತಿತರ ಮಹಿತಿಗಳನ್ನು ನೀಡಬೇಕು. ವಿಶೇಷ ಚೇತನರಿಗೆ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಬೇಕು, ಆಂಬುಲೆನ್ಸ್, ಪ್ರಥಮ ಚಿಕಿತ್ಸೆಗೆ ಅಗತ್ಯ ಔಷಧಿ, ತುರ್ತು ಸಂದರ್ಭಗಳಲ್ಲಿ ಅನುಕೂಲವಾಗುವಂತೆ ಬಿಗಿ ಬಂದೋಬಸ್ಥ್ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.