ಚಿಕ್ಕಮಗಳೂರು ಜಿಲ್ಲೆ ಕಡೂರು ಪಟ್ಟಣದ ಪಿ.ಎಂ.ಶ್ರೀ ಸರ್ಕಾರಿ ಶಾಲೆಯಲ್ಲಿ ಸರ್ಕಾರದ ಬಿಸಿಯೂಟದ ಗುಣಮಟ್ಟದ ಬಗ್ಗೆ ಗಂಭೀರ ಆರೋಪಗಳು ಕೇಳಿಬಂದಿವೆ. ಅರೆಬೆಂದ ಅನ್ನ, ಮಸಾಲೆ ಇಲ್ಲದ ಸಾರು ನೀಡಲಾಗುತ್ತಿದ್ದು, ಊಟದಲ್ಲಿ ಹುಳಗಳು ಪತ್ತೆಯಾಗಿವೆ ಎಂದು ಮಕ್ಕಳು ಆರೋಪಿಸಿದ್ದಾರೆ. ಈ ಬಗ್ಗೆ ಮಕ್ಕಳು ಹಾಗೂ ಪೋಷಕರು ದೂರು ನೀಡಿದರೂ ಶಿಕ್ಷಕರು ಹಾಗೂ ಆಡಳಿತ ಮಂಡಳಿ ನಿರ್ಲಕ್ಷ್ಯ ವಹಿಸಿರುವುದಾಗಿ ಹೇಳಲಾಗುತ್ತಿದೆ. ಕಳಪೆ ಗುಣಮಟ್ಟದ ಊಟದಿಂದ ಬೇಸತ್ತ ಕೆಲವು ಮಕ್ಕಳು ಊಟವನ್ನೇ ತೊರೆದು, ಕೆಲವರು ಮನೆಯಿಂದಲೇ ಆಹಾರ ತರಲು ಆರಂಭಿಸಿದ್ದಾರೆ. ಊಟ ಮಾಡುವ ವೇಳೆ ಅನ್ನದಲ್ಲಿ ಹುಳ ಕಂಡು ಮಕ್ಕಳು ಅನ್ನವನ್ನು ಚೆಲ್ಲಿ ಹೋಗುತ್ತಿರುವ ದೃಶ್ಯಗಳು ಸ್ಥಳೀಯರ ಮೊಬೈಲ್ನಲ್ಲಿ ಸೆರೆ ಹಿಡಿಯಲ್ಪಟ್ಟಿದ್ದು, ಬಿಸಿಯೂಟ ಯೋಜನೆಯ ನಿರ್ವಹಣೆಯ ಮೇಲಿನ ವ್ಯವಸ್ಥೆಯ ಮೌನ ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
