ಚಿಕ್ಕಮಗಳೂರು: ಮಲೆನಾಡಿನಲ್ಲಿ ಬೆಳೆ ಸಂರಕ್ಷಣೆ ಹಾಗೂ ಕಾಡುಪ್ರಾಣಿಯಿಂದ ಜೀವ ಉಳಿಸಿಕೊಳ್ಳಲು ಬಂದೂಕಿಗೆ ಪರವಾನಗಿ ನೀಡಲಾಗುತ್ತಿತ್ತು. ಆದರೆ ಅದೇ ಪರವಾನಗಿ ಕಾಡುಪ್ರಾಣಿಗಳ ಅಳಿವಿಗೆ ಕಾರಣವಾಗುತ್ತಿದ್ದು, ಇದು ಅನೇಕರ ಜೀವ ಕೂಡ ತೆಗೆದಿದೆ. ಮಲೆನಾಡಿನಲ್ಲಿ ಕಾಡಿನಂಚಿನಲ್ಲಿ ಮನೆ, ತೋಟ ಹೊಂದಿದವರಿಗೆ ಆತ್ಮರಕ್ಷಣೆಗೆ ಬಳಕೆಯಾಗಬೇಕಿದ್ದ ಬಂದೂಕುಗಳು ಇಂದು ಅಕ್ರಮ ಕೆಲಸಕ್ಕೂ ಬಳಸಲಾಗುತ್ತಿದ್ದು, ಹಲವರು ತಮ್ಮ ಆರ್ಥಿಕ ಸ್ಥಿತಿಗೆ ಅನುಗುಣವಾಗಿ ಆಯುಧಗಳನ್ನು ಉಪಯೋಗಿಸುತ್ತಿದ್ದಾರೆ. ಇತ್ತೀಚೆಗೆ ಅಕ್ರಮ ಕೆಲಸಕ್ಕೆ ಅತಿಯಾಗಿ ಬಳಕೆಯಾಗುತ್ತಿರುವ ಕಾರಣ ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು 8,000 ಕ್ಕೂ ಅಧಿಕ ಬಂದೂಕಿಗೆ ಲೈಸೆನ್ಸ್ ನೀಡಿದ್ದು, ಅದರಲ್ಲಿ ಕೆಲವರು ಮಾನದಂಡದ ಆಧಾರದಲ್ಲಿ ಹಾಗೂ ಕೆಲವರು ತಮ್ಮ ಪ್ರಭಾವ ಬಳಸಿ 10,000 ಕ್ಕೂ ಅಧಿಕ ಹಣವನ್ನು ನೀಡಿ ಲೈಸೆನ್ಸ್ ಪಡೆಯುವುದರಿಂದ ಅಗತ್ಯ ಇದ್ದವರಿಗೆ ಲೈಸೆನ್ಸ್ ಸಿಗುವುದು ದೂರದ ಮಾತೇ ಸರಿ. ಭದ್ರಾ ಅಭಯಾರಣ್ಯ, ಕುದುರೆಮುಖ ರಾಷ್ಟ್ರೀಯ ಉದ್ಯಾನವನಗಳಲ್ಲಿ ಅಪಾರವಾದ ಪ್ರಾಣಿ ಸಂಪತ್ತು ಇರುವುದರಿಂದ ಲೈಸೆನ್ಸ್ ಪಡೆದ ಕೆಲವರು ಕಡವೆ, ಜಿಂಕೆ, ಕಾಡುಹಂದಿ, ಕಾಟಿ, ಕಾಡುಕುರಿ, ಕೃಷ್ಣಮೃಗ ಸೇರಿದಂತೆ ಹಲವು ಅಪರೂಪದ ಪ್ರಾಣಿಯನ್ನು ಶಿಕಾರಿ ಮಾಡುತ್ತಿದ್ದಾರೆ. ಬರಿ ಪ್ರಾಣಿಗಳಿಗೆ ಅಷ್ಟೇ ಅಲ್ಲದೆ ತಮ್ಮ ಸ್ವಂತದವರ ಮೇಲೂ ಬಂದೂಕಿನಿಂದ ಗುಂಡು ಹಾರಿಸಿ ಕೊಲೆ ಮಾಡಿರುವ ಪ್ರಕರಣಗಳು ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು ಈವರ್ಷ ಬಂದೂಕು ಲೈಸೆನ್ಸ್ಗೆ 1,500 ಕ್ಕೂ ಹೆಚ್ಚು ಅರ್ಜಿ ಸಲ್ಲಿಸಲಾಗಿದೆ.
