ಬೆಂಗಳೂರು, ಫೆ.03: ಬೆಳಗಾವಿ ಅಧಿವೇಶನದಲ್ಲಿ ಪಾಸ್ ಆಗಿದ್ದ ದ್ವೇಷ ಭಾಷಣ ಬಿಲ್ಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಸಹಿ ಹಾಕದೇ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಅಂಗಳಕ್ಕೆ ರವಾನೆ ಮಾಡಿರುವುದರಿಂದ ರಾಜ್ಯ ಸರ್ಕಾರ ಹಾಗೂ ರಾಜ್ಯಪಾಲರ ನಡುವಿನ ಸಂಘರ್ಷ ಮತ್ತೆ ಉಲ್ಬಣಗೊಂಡಿದೆ. ದ್ವೇಷ ಭಾಷಣದ ವ್ಯಾಖ್ಯಾನವೇ ಮಸೂದೆಯಲ್ಲಿ ಅಸ್ಪಷ್ಟವಾಗಿದ್ದು, ಮಸೂದೆಗೆ ಒಪ್ಪಿಗೆ ನೀಡಬಾರದೆಂದು 40ಕ್ಕೂ ಹೆಚ್ಚು ಮನವಿಗಳು ಬಂದಿರುವುದನ್ನು ಉಲ್ಲೇಖಿಸಿರುವ ರಾಜ್ಯಪಾಲರು, ಬಿಲ್ ವರ್ಗಾವಣೆಗಾಗಿ 29 ಕಾರಣಗಳನ್ನು ನೀಡಿದ್ದಾರೆ. ಈ ಮಸೂದೆ ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಮೂಲಭೂತ ಹಕ್ಕುಗಳಿಗೆ ಧಕ್ಕೆ ತರುವ ಸಾಧ್ಯತೆ ಇದೆ, ಅರ್ಥಪೂರ್ಣ ಸಮಾಲೋಚನೆ ಇಲ್ಲದೇ ಅಂಗೀಕರಿಸಲಾಗಿದೆ, ಕೆಲವು ಕಾನೂನು ತೊಡಕುಗಳಿವೆ, ಮಿತಿಮೀರಿದ ಹಾಗೂ ಭಯಾನಕ ಪರಿಣಾಮ ಬೀರುತ್ತದೆ, ಸತ್ಯ ಅಥವಾ ಬೌದ್ಧಿಕ ಟೀಕೆ ಮಾಡಿದವರನ್ನೂ ಬಂಧಿಸಬಹುದಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ ಹಾಗೂ ಅಧಿಕಾರಿಗಳ ಇಚ್ಛೆಯಂತೆ ಯಾವುದೇ ಕಾರ್ಯಕ್ರಮ ನಿಷೇಧಿಸುವ ಅವಕಾಶ ಇದೆ ಎಂಬ ಅಂಶಗಳನ್ನು ರಾಜ್ಯಪಾಲರು ಉಲ್ಲೇಖಿಸಿದ್ದಾರೆ. ರಾಜ್ಯಪಾಲರ ಈ ನಡೆಗೆ ಕಾಂಗ್ರೆಸ್ ನಾಯಕರು ವಿರೋಧ ವ್ಯಕ್ತಪಡಿಸಿದ್ದರೆ, ಬಿಜೆಪಿ ನಾಯಕರು ಸಮರ್ಥನೆ ನೀಡಿದ್ದಾರೆ. ದ್ವೇಷ ಭಾಷಣ ಯಾರಿಂದ ನಡೆದರೂ ತಪ್ಪೇ ಎಂಬ ಉದ್ದೇಶದಿಂದ ಸರ್ಕಾರ ಬಿಲ್ ತಂದಿದೆ ಎಂದು ಕಾಂಗ್ರೆಸ್ ವಾದಿಸಿದರೆ, ನಿರ್ದಿಷ್ಟ ವರ್ಗವನ್ನು ಗುರಿಯಾಗಿಸಿ ಕಾನೂನಿನಲ್ಲಿ ಸಿಲುಕಿಸಲು ಬಿಲ್ ತಂದಿದ್ದರು. ಇದಕ್ಕೆ ನಾವು ವಿರೋಧಿಸಿದೆವು ಹೀಗಾಗಿ ರಾಜ್ಯಪಾಲರು ದ್ವೇಷ ಭಾಷಣ ಬಿಲ್ ರಾಷ್ಟ್ರಪತಿಗಳಿಗೆ ಕಳಿಸಿದ್ದಾರೆ ಎಂದು ಬಿಜೆಪಿ ವಾದಿಸಿದೆ.
