
ನವದೆಹಲಿ: ಪಶ್ಚಿಮ ಏಷ್ಯಾ ಸಂಘರ್ಷದ ನಡುವೆಯೇ ಜಾಗತಿಕ ಪೂರೈಕೆ ಸರಪಳಿಗಳಲ್ಲಿ ಉಂಟಾದ ಅಡೆತಡೆಗಳು ಮತ್ತು ಬೆಲೆ ಏರಿಕೆಯ ಒತ್ತಡದ ನಡುವೆ ಗ್ರಾಹಕರ ಮೇಲಿನ ಹೊರೆಯನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಪ್ರಮುಖ 41 ಪೆಟ್ರೋಕೆಮಿಕಲ್ ಉತ್ಪನ್ನಗಳ ಆಮದಿನ ಮೇಲಿನ ಕಸ್ಟಮ್ಸ್ ಸುಂಕವನ್ನು ಜೂನ್ 30ರವರೆಗೆ ಸಂಪೂರ್ಣವಾಗಿ ತೆರವುಗೊಳಿಸಿದೆ. ಪ್ಲಾಸ್ಟಿಕ್, ಪ್ಯಾಕೇಜಿಂಗ್, ಜವಳಿ, ಔಷಧಗಳು, ರಾಸಾಯನಿಕಗಳು, ವಾಹನ ಭಾಗಗಳು ಸೇರಿದಂತೆ ಪೆಟ್ರೋಕೆಮಿಕಲ್ ಕಚ್ಚಾ ವಸ್ತುಗಳು ಮತ್ತು ಮಧ್ಯವರ್ತಿಗಳ ಮೇಲೆ ಅವಲಂಬಿತ ಕೈಗಾರಿಕೆಗಳಿಗೆ ಈ ಕ್ರಮದಿಂದ ಬಲ ಸಿಗಲಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ಜಲರಹಿತ ಅಮೋನಿಯಾ, ಮೆಥನಾಲ್, ಟೊಲ್ಯೂನ್, ಸ್ಟೈರೀನ್, ವಿನೈಲ್ ಕ್ಲೋರೈಡ್ ಮಾನೋಮರ್, ಮೊನೊಎಥಿಲೀನ್ ಗ್ಲೈಕಾಲ್ (MEG), ಫೀನಾಯಿಲ್, ಅಸಿಟಿಕ್ ಆಮ್ಲ, ಶುದ್ಧೀಕರಿಸಿದ ಟೆರೆಫ್ತಾಲಿಕ್ ಆಮ್ಲ (PTA) ಸೇರಿದಂತೆ ಹಲವು ಪ್ರಮುಖ ಪೆಟ್ರೋಕೆಮಿಕಲ್ಗಳ ಜೊತೆಗೆ ಪಾಲಿಥಿಲೀನ್, ಪಾಲಿಪ್ರೊಪಿಲೀನ್, ಪಾಲಿಸ್ಟೈರೀನ್, ಪಾಲಿವಿನೈಲ್ ಕ್ಲೋರೈಡ್ (PVC), ಪಾಲಿಥಿಲೀನ್ ಟೆರೆಫ್ಥಲೇಟ್ (PET) ಚಿಪ್ಸ್, ಅಕ್ರಿಲೋನಿಟ್ರೈಲ್-ಬ್ಯುಟಾಡಿನ್-ಸ್ಟೈರೀನ್ (ABS), ಪಾಲಿಕಾರ್ಬೊನೇಟ್ಗಳಂತಹ ಎಂಜಿನಿಯರಿಂಗ್ ಪ್ಲಾಸ್ಟಿಕ್ಗಳು ಹಾಗೂ ಎಪಾಕ್ಸಿ ರೆಸಿನ್ಗಳು, ಪಾಲಿಯುರೆಥೇನ್ಗಳು, ಫಾರ್ಮಾಲ್ಡಿಹೈಡ್ ಉತ್ಪನ್ನಗಳು ಮತ್ತು ಪಾಲಿಯೋಲ್ಗಳಂತಹ ವಿಶೇಷ ರಾಸಾಯನಿಕಗಳಿಗೂ ಈ ವಿನಾಯಿತಿ ಅನ್ವಯವಾಗುತ್ತದೆ. ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷ ಮತ್ತು ಫೆಬ್ರವರಿ 28ರಂದು ಅಮೆರಿಕ ಹಾಗೂ ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ನಡೆಸಿದ ಮಿಲಿಟರಿ ದಾಳಿಯ ಬಳಿಕ ಜಾಗತಿಕ ಕಚ್ಚಾ ತೈಲ ಬೆಲೆಗಳು ಸುಮಾರು ಶೇ.50ರಷ್ಟು ಏರಿಕೆಯಾಗಿದ್ದು, ಹಡಗು ಮಾರ್ಗಗಳಲ್ಲಿ ಅಡೆತಡೆಗಳು ಉಂಟಾಗಿ ರಸಗೊಬ್ಬರ, ಕಚ್ಚಾ ತೈಲ ಹಾಗೂ ನೈಸರ್ಗಿಕ ಅನಿಲದ ಆಮದು ಕುರಿತು ಆತಂಕ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ದೇಶೀಯ ಕೈಗಾರಿಕೆಗಳಿಗೆ ಅಗತ್ಯ ಪೆಟ್ರೋಕೆಮಿಕಲ್ ಇನ್ಪುಟ್ಗಳ ನಿರಂತರ ಲಭ್ಯತೆ ಖಚಿತಪಡಿಸಲು, ಡೌನ್ಸ್ಟ್ರೀಮ್ ಕ್ಷೇತ್ರಗಳ ಮೇಲಿನ ವೆಚ್ಚದ ಒತ್ತಡ ಕಡಿಮೆ ಮಾಡಲು ಹಾಗೂ ದೇಶದಲ್ಲಿ ಪೂರೈಕೆ ಸ್ಥಿರತೆಯನ್ನು ಕಾಪಾಡಲು ಈ ಕ್ರಮವನ್ನು ತಾತ್ಕಾಲಿಕ ಮತ್ತು ಉದ್ದೇಶಿತ ಪರಿಹಾರವಾಗಿ ಕೈಗೊಳ್ಳಲಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಇದರ ಜೊತೆಗೆ ಗ್ರಾಹಕರನ್ನು ಏರುತ್ತಿರುವ ಇಂಧನ ಬೆಲೆಗಳಿಂದ ರಕ್ಷಿಸಲು ಸರ್ಕಾರ ಇತ್ತೀಚೆಗೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್ಗೆ 10 ರೂ. ಕಡಿತಗೊಳಿಸಿದ್ದು, ಪ್ರಸ್ತುತ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ಲೀಟರ್ಗೆ 3 ರೂ. ಆಗಿದ್ದು, ಡೀಸೆಲ್ ಮೇಲೆ ಯಾವುದೇ ಅಬಕಾರಿ ಸುಂಕವಿಲ್ಲ. ಇದೇ ವೇಳೆ ಡೀಸೆಲ್ಗೆ ಪ್ರತಿ ಲೀಟರ್ಗೆ 21.50 ರೂ. ಮತ್ತು ಏವಿಯೇಷನ್ ಟರ್ಬೈನ್ ಇಂಧನಕ್ಕೆ (ATF) ಪ್ರತಿ ಲೀಟರ್ಗೆ 29.50 ರೂ. ರಫ್ತು ಸುಂಕ ವಿಧಿಸಲಾಗಿದೆ.




