ಬೆಂಗಳೂರು: ಬಿಪಿಎಲ್ ಕಾರ್ಡ್ ನಿರೀಕ್ಷೆಯಲ್ಲಿರುವವರಿಗೆ ಹಾಗೂ ಈಗಾಗಲೇ ಅರ್ಜಿ ಸಲ್ಲಿಸಿದವರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆಚ್ಎಚ್ ಮುನಿಯಪ್ಪ ಗುಡ್ ನ್ಯೂಸ್ ನೀಡಿದ್ದು, ರಾಜ್ಯದಲ್ಲಿ ಅರ್ಹರ ಬಿಪಿಎಲ್ ಕಾರ್ಡ್ಗಳನ್ನು ರದ್ದುಗೊಳಿಸಲಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಸದನದಲ್ಲಿಯೂ ಉತ್ತರ ನೀಡಿರುವುದಾಗಿ ತಿಳಿಸಿದ ಅವರು, ಒಂದು ವೇಳೆ ಕಾರ್ಡ್ ರದ್ದಾಗಿದ್ದರೆ ಸಂಬಂಧಿತ ತಹಶೀಲ್ದಾರರಿಗೆ ಅರ್ಜಿ ಸಲ್ಲಿಸಿದರೆ 15 ದಿನಗಳೊಳಗೆ ಅರ್ಹರಿಗೆ ಬಿಪಿಎಲ್ ಕಾರ್ಡ್ ನೀಡಲಾಗುತ್ತದೆ ಎಂದು ಹೇಳಿದರು. ಎಪಿಎಲ್ ಕಾರ್ಡ್ಗಳ ವಿಷಯದಲ್ಲಿ ಯಾವುದೇ ಹೊಸ ಕ್ರಮ ಕೈಗೊಳ್ಳಲಾಗುತ್ತಿಲ್ಲ ಎಂದು ಹೇಳಿದ ಅವರು, ಕೇಂದ್ರ ಸರ್ಕಾರದ ಸೂಚನೆಯಂತೆ ಪರಿಷ್ಕರಣೆ ನಡೆಯುತ್ತಿದ್ದು, ಬಿಪಿಎಲ್ ಅರ್ಹತೆಯಿಲ್ಲದವರು ಎಪಿಎಲ್ ವರ್ಗಕ್ಕೆ ಸೇರಬೇಕು ಎಂದರು. ರಾಜ್ಯದಲ್ಲಿ ಸುಮಾರು 7 ಲಕ್ಷ ಕಾರ್ಡ್ಗಳು ಅರ್ಹತೆ ಮೀರಿದವರ ಬಳಿ ಇದ್ದು, ಸುಮಾರು 14 ಲಕ್ಷ ಎಪಿಎಲ್ ಕುಟುಂಬಗಳು ಬಿಪಿಎಲ್ ಕಾರ್ಡ್ ಹೊಂದಿರುವುದು ಪತ್ತೆಯಾಗಿದ್ದು, ಇದರಿಂದ ನಿಜವಾದ ಬಿಪಿಎಲ್ ಫಲಾನುಭವಿಗಳಿಗೆ ತೊಂದರೆ ಆಗದಂತೆ ಹಂತ ಹಂತವಾಗಿ ಪರಿಷ್ಕರಣೆ ನಡೆಸಲಾಗುತ್ತದೆ ಎಂದು ಮಾಹಿತಿ ನೀಡಿದರು.
