
ಕಾಫಿ-ಟೀ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ!? ಅದರಲ್ಲೂ ನಮ್ಮ ಭಾರತೀಯರಿಗೆ ಬೆಳಿಗ್ಗೆ ಮೊದಲು ಎದ್ದ ತಕ್ಷಣ ಏನಾದ್ರೂ ಕುಡಿಯಲೇಬೇಕು. ಇಲ್ಲವಾದರೆ ದಿನವಿಡೀ ಏನೋ ಕಳೆದುಕೊಂಡಂತೆ ಇರುತ್ತಾರೆ. ಒಂದು ದಿನದಲ್ಲಿ ಕನಿಷ್ಟ ೩-೪ ಬಾರಿಯಾದರೂ ಕಾಫಿ-ಟೀ ಕುಡಿಯುತ್ತಾರೆ. ಮನೆ, ಶಾಲೆ, ಕಛೇರಿ ಕೆಲಸ ಮಾಡುವ ಸ್ಥಳ ಹೀಗೆ ಭೇದಬಾವ ಇಲ್ಲದೆ ಎಲ್ಲಾ ಕಡೆ ಸರ್ವವ್ಯಾಪಿಯಾಗಿ ಇದೆ ಅಂದ್ರೂ ತಪ್ಪಾಗಲ್ಲ. ಕಛೇರಿಯಲ್ಲಿ ಬಾಸ್ ತಲೆನೋವು ತಡೆದುಕೊಳ್ಳೋಕೆ ಆಗದೆ ಸ್ವಲ್ಪ ರಿಲ್ಯಾಕ್ಸ್ ಮಾಡ್ಕೊಳೋಕೆ ಇರೋದು ಒಂದೇ ಒಂದು ಪರಿಹಾರ ಅಂದರೆ ಇದೇ ಕಾಫಿ-ಟೀ. ಯಾಕಂದ್ರೆ ಚೀಪ್ ಆಂಡ್ ಬೆಸ್ಟ್ ನಲ್ಲಿ ತಲೆನೋವು ಕಡಿಮೆಯಾಗೋದು ಇದರಿಂದ ಮಾತ್ರ.
ಆದರೆ ಇದೀಗ ನೀವು ಈ ಟೀ ಸುದ್ದಿ ಓದಿದ್ರೆ ತಲೆ ನೋವು ಸ್ವಲ್ಪ ಜಾಸ್ತೀನೆ ಆಗ್ಬೋದು. ಹೌದು ದುಬೈನಲ್ಲಿ ಭಾರತೀಯ ಮೂಲದ ಸುಚೇತಾ ಶರ್ಮ ನಡೆಸುತ್ತಿರುವ ಬೊಹೊ ಕೆಫೆಯಲ್ಲಿ ಗೋಲ್ಡ್ ಚಾಯ್ ಕುಡಿಯಬಹುದು. ಈ ಗೋಲ್ಡ್ ಚಾಯ್ ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಈ ಚಹಾದ ಮೇಲೆ ೨೪ ಕ್ಯಾರೆಟ್ ಗೋಲ್ಡ್ ತೆಳು ಪದರ ಸೇರಿಸಲಾಗುತ್ತದೆ. ಇದನ್ನು ಸಂಪೂರ್ಣ ಶುದ್ಧ ಬೆಳ್ಳಿ ಲೋಟದಲ್ಲಿ ನೀಡಲಾಗುತ್ತದೆ. ಜೊತೆಗೆ ಇದರೊಂದಿಗೆ ಕ್ರೊಯಿಸ್ಯಾಂಟ್ ತಿನಿಸನ್ನು ಕೊಡಲಾಗುತ್ತದೆ. ಈ ಕೆಫೆ ಡಿ.ಐ.ಎಫ್.ಸಿ ಎಮಿರೇಟ್ಸ್ ಫಿನಾನ್ಶಿಯಲ್ ಟವರ್ ನಲ್ಲಿ ಇದೆ. ಈ ಚಹಾ ಸದ್ಯಕ್ಕೆ ಎಲ್ಲೆಡೆ ಸದ್ದು ಮಾಡ್ತಿದ್ದು, ಚಹಾದ ತರಾನೆ ಬಿಸಿ ಬಿಸಿ ಚರ್ಚೆ ಆಗ್ತಿದೆ. ನೀವು ದುಬೈಗೆ ಹೋದ್ರೆ ಮಿಸ್ ಮಾಡ್ದೇ ಈ ಕೆಫೆಗೆ ಹೋಗಿ ಈ ಗೋಲ್ಡ್ ಟೀ ರುಚಿ ನೋಡಿ. ಹಾ..ಅಂದಾಗೆ ಮತ್ತೊಂದು ವಿಚಾರ ಇದರ ಬೆಲೆ ೧ ಲಕ್ಷ ರೂಪಾಯಿ ಅಂತೆ!…ಒತ್ತಡ ತಲೆನೋವನ್ನು ನಿವಾರಿಸತ್ತೆ ಅಂದ್ರೆ ಈ ಗೋಲ್ಡ್ ಟೀ ಮಾತ್ರ ಮತ್ತಷ್ಟು ತಲೆನೋವು ತರಿಸತ್ತೆ ಅಂದರೆ ತಪ್ಪಾಗಲ್ಲ ಬಿಡಿ!