ಕೊಟ್ಟಿಗೆಹಾರ: ಬಣಕಲ್ ಕ್ರೈಸ್ತರ ಅಭಿವೃದ್ಧಿ ಸಂಘ ಮತ್ತು ವಿಮುಕ್ತಿ ಚಾರಿಟೇಬಲ್ ಟ್ರಸ್ಟ್ ಅವರ ಸಂಯುಕ್ತಾಶ್ರಯದಲ್ಲಿ ಮಂಗಳೂರಿನ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆಯ ವತಿಯಿಂದ ಮಾರ್ಚ್ 29ರಂದು ಬಣಕಲ್ನ ಚರ್ಚ್ ಸಭಾಭವನದಲ್ಲಿ ಬೆಳಿಗ್ಗೆ 10ರಿಂದ ಮಧ್ಯಾಹ್ನ 3.30ರವರೆಗೆ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ ಎಂದು ಸಂಯೋಜಕ ಹಾಗೂ ರಾಜ್ಯ ಕ್ರಿಶ್ಚಿಯನ್ ಅಭಿವೃದ್ಧಿ ನಿಗಮದ ನಿರ್ದೇಶಕ ಹರ್ಷ ಮೆಲ್ವಿನ್ ಲಸ್ರಾದೊ ತಿಳಿಸಿದ್ದಾರೆ. ಶಿಬಿರದಲ್ಲಿ ಸಾಮಾನ್ಯ ಕಾಯಿಲೆಗಳ ತಪಾಸಣೆ ಜೊತೆಗೆ ಇಸಿಜಿ, ಬಿಪಿ ಮತ್ತು ಸಕ್ಕರೆ ಕಾಯಿಲೆ ಪರೀಕ್ಷೆಗಳು ಉಚಿತವಾಗಿ ಲಭ್ಯವಿದ್ದು, ಮಧ್ಯಾಹ್ನ 12.30 ನಂತರ ಸ್ತ್ರೀರೋಗ ತಪಾಸಣೆ ಮತ್ತು ಸಂತಾನೋತ್ಪತ್ತಿ ಆರೋಗ್ಯ ಸಮಾಲೋಚನೆ ನೀಡಲಾಗುತ್ತದೆ. ಇದರೊಂದಿಗೆ ಕಣ್ಣಿನ ತಪಾಸಣೆ ನಡೆಸಿ ಅಗತ್ಯವಿದ್ದವರಿಗೆ ಕನ್ನಡಕ ವಿತರಣೆ, ಮಕ್ಕಳ ಹಾಗೂ ಚರ್ಮರೋಗ ತಪಾಸಣೆಗೆ ವಿಶೇಷ ವ್ಯವಸ್ಥೆ ಮಾಡಲಾಗಿದೆ. ‘ಉತ್ತಮ ಆರೋಗ್ಯ–ಉತ್ತಮ ಜೀವನ’ ದ್ಯೇಯದೊಂದಿಗೆ ಸಾರ್ವಜನಿಕರು ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಆಯೋಜಕರು ಮನವಿ ಮಾಡಿದ್ದಾರೆ.
