ಮಂಗಳೂರು, ಜ.22: ದೇವಸ್ಥಾನಗಳಲ್ಲಿ ಕೇಸರಿ ಸೇರಿದಂತೆ ಯಾವುದೇ ರಾಜಕೀಯ ಧ್ವಜ ಹಾರಿಸಬಾರದು ಎಂದು ಕಾಂಗ್ರೆಸ್ನ ಮಾಜಿ ಸಚಿವ ಹಾಗೂ ಬಂಟ್ವಾಳ ಕ್ಷೇತ್ರದ ಮಾಜಿ ಶಾಸಕ ರಮಾನಾಥ ರೈ ನೀಡಿರುವ ಹೇಳಿಕೆ ದಕ್ಷಿಣ ಕನ್ನಡದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದೆ. ಉಡುಪಿ ಕೃಷ್ಣಮಠದ ಪರ್ಯಾಯ ಮಹೋತ್ಸವದಲ್ಲಿ ಜಿಲ್ಲಾಧಿಕಾರಿ ಟಿಕೆ ಸ್ವರೂಪಾ ಕೇಸರಿ ಧ್ವಜ ಹಾರಿಸಿದ್ದನ್ನು ಖಂಡಿಸಿದ ಅವರು, ದೇಗುಲಗಳು ಎಲ್ಲರಿಗೂ ಸಂಬಂಧಿಸಿದ ಪವಿತ್ರ ಸ್ಥಳಗಳಾಗಿದ್ದು ಇಲ್ಲಿ ಕಾಂಗ್ರೆಸ್, ಕೇಸರಿ ಅಥವಾ ಹಸಿರು ಯಾವುದೇ ಬಾವುಟಗಳಿಗೂ ಅವಕಾಶ ಇರಬಾರದು ಎಂದು ಹೇಳಿದ್ದಾರೆ. ಮಂಗಳೂರಿನ ಗಾಂಧಿ ಪ್ರತಿಮೆ ಬಳಿ ನಡೆದ ಉಪವಾಸ ಸತ್ಯಾಗ್ರಹದಲ್ಲಿ ಈ ಹೇಳಿಕೆ ನೀಡಿದ ಬಳಿಕ, ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂ ಪರ ಸಂಘಟನೆಗಳು, ನಾಯಕರು ಹಾಗೂ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, “ಹಿಂದೂ ದೇವಾಲಯದಲ್ಲಿ ಕೇಸರಿ ಧ್ವಜವಲ್ಲದೆ ಬೇರೆ ಯಾವ ಧ್ವಜ ಹಾಕಬೇಕು?” ಎಂದು ಪ್ರಶ್ನಿಸಿದ್ದಾರೆ. ಇನ್ನು ಬಿಜೆಪಿ ನಾಯಕರು ಮತ್ತು ಸಂಸದ ಬ್ರಿಜೇಶ್ ಚೌಟ ಅವರು, ಈ ಹೇಳಿಕೆ ಕಾಂಗ್ರೆಸ್ನ ಹಿಂದೂ ವಿರೋಧಿ ಮನಸ್ಥಿತಿಯನ್ನು ತೋರಿಸುತ್ತದೆ ಹಾಗೂ ಎಸ್ಡಿಪಿಐ ಓಲೈಕೆಯ ರಾಜಕಾರಣವಾಗಿದೆ ಎಂದು ಕಿಡಿಕಾರಿದ್ದಾರೆ. ಈ ನಡುವೆ ಜಿಲ್ಲಾಧಿಕಾರಿ ತಮ್ಮ ಕ್ರಮ ರಾಜಕೀಯ ಉದ್ದೇಶದಿಂದಲ್ಲ, ಅಧಿಕೃತ ಕರ್ತವ್ಯದ ಭಾಗವಾಗಿಯೇ ಆಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
