
ಮೂಡಿಗೆರೆ: ಮಲೆನಾಡಿನ ಜಾನಪದ ಕಲೆಗಳು ಯಾವುದೇ ಗುರು ಅಥವಾ ಶಾಸ್ತ್ರಗಳಿಂದ ಹುಟ್ಟಿದವಲ್ಲ, ಜನಪದರ ಅನುಭವ, ಪ್ರಕೃತಿ ಮತ್ತು ಬದುಕಿನ ನಡುವೆ ಬಾಯಿಂದ ಬಾಯಿಗೆ ಬೆಳೆದ ಸಂಸ್ಕೃತಿಯೇ ಜಾನಪದವಾಗಿದ್ದು, ಇಂದಿನ ಊಟ, ಉಪಹಾರ, ಮನೆಮದ್ದುಗಳು ಹಾಗೂ ವೈದ್ಯಕೀಯ ಜ್ಞಾನದಲ್ಲೂ ಜಾನಪದ ಅಡಕವಾಗಿದೆ ಎಂದು ರಾಘವೇಂದ್ರ ಕೆಸವಳಲು ಹೇಳಿದರು. ತಾಲ್ಲೂಕಿನ ದಾರದಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ನಾಟಕ ಜಾನಪದ ಪರಿಷತ್ ತಾಲ್ಲೂಕು ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜಾನಪದ ಮತ್ತು ಆರೋಗ್ಯ ಅರಿವು ಹಾಗೂ ಜಾನಪದ ಕಲಾಸಿರಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಜಾನಪದವು ಕಲ್ಪನೆಯಿಂದಲ್ಲ, ಜನಪದರ ಜೀವನಾನುಭವದ ಮೂಸೆಯಿಂದ ಹುಟ್ಟಿದ್ದು, ಮಲೆನಾಡಿನಲ್ಲಿ ಜಾನಪದ ಕಲೆಗಳು ಇತಿಹಾಸಕ್ಕೆ ಸೀಮಿತವಾಗದೇ ಜನರ ದೈನಂದಿನ ಬದುಕಿನ ಭಾಗವಾಗಬೇಕು ಎಂದು ಆಶಿಸಿದರು. ಇದೇ ಸಂದರ್ಭದಲ್ಲಿ ತಾಲ್ಲೂಕು ವೈದ್ಯಾಧಿಕಾರಿ ಡಾ. ಪ್ರಿಯಾಂಕ ಪ್ರಭಾಕರ್ ವಿದ್ಯಾರ್ಥಿಗಳು ಆರೋಗ್ಯದತ್ತ ಗಮನಹರಿಸಬೇಕು, ಮೊಬೈಲ್ ಬಳಕೆಯನ್ನು ಮಿತಗೊಳಿಸಬೇಕು ಹಾಗೂ ಸಾಮಾಜಿಕ ಸಮಸ್ಯೆಗಳ ಬಗ್ಗೆ ಎಚ್ಚರಿಕೆಯಿಂದಿರಬೇಕೆಂದು ಸಲಹೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಜಾನಪದ ಪರಿಷತ್ ಮೂಡಿಗೆರೆ ಘಟಕದ ಅಧ್ಯಕ್ಷ ರವಿಕುನ್ನಹಳ್ಳಿ ಮಾತನಾಡಿ, ಜಾನಪದ ಕಲೆ, ಸಾಹಿತ್ಯ ಮತ್ತು ಆರೋಗ್ಯದ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು. ಇದೇ ಸಂದರ್ಭದಲ್ಲಿ ಮಹೇಶ್, ನಾಗೇಶ್ ಕೆ. ರಘು ಹೇಮಾವತಿ ನಗರ, ಪ್ರೇಮಕುಮಾರ್ ಅವರಿಗೆ ಜಾನಪದ ಕಲಾ ಸಿರಿ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಯಿತು.




