ಚಿಕ್ಕಮಗಳೂರು: ಬಿಸಿಲಿನ ತೀವ್ರತೆಗೆ ಮಲೆನಾಡಿನ ತೊಗರಿಹಂಕಲ್ ಗ್ರಾಮದಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿ, ಸುಮಾರು 8 ಎಕರೆ ಕಬ್ಬಿನ ಗದ್ದೆ ಹಾಗೂ ಒಂದೂವರೆ ಎಕರೆ ಕಾಫಿ ತೋಟ ಸಂಪೂರ್ಣ ಭಸ್ಮವಾಗಿದೆ. ಮುಳ್ಳಯ್ಯನಗರಿ ತಪ್ಪಲಿನ ಈ ಗ್ರಾಮದಲ್ಲಿ ಪುಟ್ಟಸ್ವಾಮಿ, ಹೇಮೇಶ್ ಮತ್ತು ಸುರೇಶ್ ಅವರಿಗೆ ಸೇರಿದ ಜಮೀನು ಬೆಂಕಿಗಾಹುತಿಯಾಗಿದ್ದು, ಬೇಸಿಗೆಯ ಬಿಸಿಲು ಹಾಗೂ ಗಾಳಿಯ ವೇಗದಿಂದ ಬೆಂಕಿ ಕ್ಷಣಾರ್ಧದಲ್ಲಿ ವ್ಯಾಪಿಸಿದೆ. ಗ್ರಾಮಸ್ಥರು ಶುಭಕಾರ್ಯದಲ್ಲಿ ತೊಡಗಿದ್ದರಿಂದ ಘಟನೆ ತಡವಾಗಿ ಗಮನಕ್ಕೆ ಬಂದಿದ್ದು, ದಾರಿಹೋಕರು ಎಸೆದ ಬೀಡಿ ಅಥವಾ ಸಿಗರೇಟ್ ತುಂಡಿನಿಂದ ಬೆಂಕಿ ಹೊತ್ತಿಕೊಂಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಬೆಳೆಗಳ ಜೊತೆಗೆ ಲಕ್ಷಾಂತರ ಮೌಲ್ಯದ ಕೃಷಿ ಉಪಕರಣಗಳು ನಾಶವಾಗಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿ ಪಕ್ಕದ ಜಮೀನುಗಳಿಗೆ ಹರಡುವುದನ್ನು ತಡೆದಿದ್ದಾರೆ.
