ಕೆಲವರ ಬದುಕಿನಲ್ಲಿ ವಿಧಿ ತುಂಬಾ ಘೋರವಾಗಿ ನಡ್ಕೊಂಡು ಬಿಡ್ತಾನೆ ಕಣ್ರೀ ಅಂತ ಹೇಳ್ತಿರ್ತೀವಿ, ತುಂಬಾ ಮುದ್ದಾದ ಹುಡುಗಿಗೆ ಪೋಲಿಯೋ, ಸಧೃಡ ಯುವಕನಿಗೆ ಕಣ್ಣುಗಳು ಕಾಣುವುದಿಲ್ಲ, ಭಿಕ್ಷುಕನ ಕಣ್ಣಲ್ಲಿ ಸಾವಿರ ಆಸೆಗಳನ್ನು ತುಂಬಿ ಬಿಡುತ್ತಾನೆ. ಆದರೆ ಇವೆಲ್ಲದಕ್ಕಿಂತ ಕೆಲವು ಹೆಣ್ಣು ಮಕ್ಕಳ ಬದುಕಿನಲ್ಲಿ ವಿಧಿ ನಡೆದುಕೊಳ್ಳುವ ರೀತಿ ನಿಜಕ್ಕೂ ಘೋರ! ಅದರಲ್ಲೂ ಮದುವೆಯಾದ ಚಿಕ್ಕ ವಯಸ್ಸಿನ ಹೆಣ್ಣು ಮಕ್ಕಳ ಗಂಡನನ್ನು ಕಸಿದುಕೊಂಡು ಹೋದರೆ ಆಕೆಯ ನೋವಿಗೆ ಕೊನೆ ಎಂಬುದೇ ಇಲ್ಲ. ಕಣ್ಣಿಗೆ ಕಾಣದ ವಿಧಿಯ ಬಗ್ಗೆ ಹಳಿದುಕೊಂಡರೆ ಪ್ರಯೋಜನವಿಲ್ಲ, ಆದರೆ ಗಂಡನನ್ನು ಕಳೆದುಕೊಂಡ ಹೆಣ್ಣನ್ನು ಸಮಾಜ ನಡೆಸಿಕೊಳ್ಳುವ ರೀತಿ ಇದೆಯಲ್ಲ, ಅದು ವಿಧಿಯಾಟಕ್ಕಿಂತಲೂ ಅಮಾನವೀಯ. ಹಾಗೇ ಸುಮ್ನೆ ಗಮನಿಸಿ ನೋಡಿ, ನಿಮ್ಮದೇ ಕೇರಿಯಲ್ಲಿ ಅಂತಹ ಹೆಣ್ಣು ಮಕ್ಕಳು ಇರುತ್ತಾರೆ. ಅವರ ಬಗ್ಗೆ ನಿಮ್ಗೆ ಆಶ್ಚರ್ಯವಾಗುವಂಥ ರೂಮರ್ಗಳಿರುತ್ತವೆ, ಆಕೆಯ ನಡತೆಯ ಬಗ್ಗೆ ಸಂಶಯ ಪಡುವವರು, ಸಹಾಯದ ನೆಪದಲ್ಲಿ ಪದೇ ಪದೇ ಹೋಗಿ ಹಿಂಸೆ ಕೊಡುವ ಗಂಡಸರು, ತನ್ನ ಗಂಡ ನನ್ನ ಹೇಗೆಲ್ಲಾ ಪ್ರೀತಿಸ್ತಾನೆ ಅಂಥ ಹೇಳಿಕೊಳ್ಳೋ ಗರತಿಯರು ಹೀಗೆ ಇನ್ನು ಆ ತಾಯಿಯ ನೆಮ್ಮದಿ ಕಿತ್ತುಕೊಂಡು ಬಿಡೋರ ಹಿಂಡೇ ನೆರೆದಿರುತ್ತದೆ. ಎಷ್ಟೋ ಸಲ ನೋವಾದಾಗ ಅವರು ಅಳುವುದಿಲ್ಲ. ಯಾಕೆಂದರೆ ಅವರಿಗೆ ಕಣ್ಣೀರು ಕೂಡ ಬತ್ತಿ ಹೋಗಿರುತ್ತೆ! ಇವಿಷ್ಟು ಸಮಾಜದ ವರ್ತನೆಯಾದರೆ ಇನ್ನು ಕುಟುಂಬ ವರ್ಗದವರ ವರ್ತನೆಯೇ ಬೇರೆ ತರದ್ದಾಗಿರುತ್ತದೆ. ಗಂಡನ ಮನೆಯವರು ಆಕೆಯೇ ಗಂಡನನ್ನು ಕೊಂದಿದ್ದಾಳೆನೋ… ಎಂಬ ರೀತಿಯಲ್ಲೇ ಮಾತಾಡಿಸುತ್ತಾರೆ. ವಿಪರ್ಯಾಸವೆಂದರೆ ಈಗಾಗಲೇ ಗಂಡನನ್ನು ಕಳೆದುಕೊಂಡಿರುವ ಕೆಲ ಅತ್ತೆಯರು ಕೂಡ ಸೊಸೆಗೆ ‘ಗಂಡನನ್ನು ತಿಂದವಳು’ ಎಂದು ಆರೋಪಿಸುತ್ತಾರೆ! ಇತ್ತ ತವರು ಮನೆಯಲ್ಲಿ ವಿಧವೆಯಾದ ಮಗಳ ಭಾರ ಎಲ್ಲಿ ನಮ್ಮ ಹೆಗಲಿಗೆ ಬರುತ್ತದೋ.. ಎಂದು ಸಂಪ್ರದಾಯದ ನೆಪ ಒಡ್ಡಿ, ಆಕೆಯಿಂದ ದೂರ ಉಳಿಯುತ್ತಾರೆ. ಇನ್ನು ಮನೆಯಲ್ಲಿ ಯಾವುದಾದರೂ ಶುಭ ಕಾರ್ಯ ನಡೆಯುತ್ತಿದ್ದಾಗ ಆಕೆಯದ್ದು ನಾಯಿಪಾಡು. ಏದುರಿಗೆ ಬರುವಂತಿಲ್ಲ, ಗೆಳತಿಯರ ಗುಂಪಿನಲ್ಲಿ ಕುಳಿತಿದ್ದರೆ, ಇವಳನ್ನು ಹೊರತುಪಡಿಸಿ ಉಳಿದವರಿಗೆ ಮಾತ್ರ ಕುಂಕುಮ, ಹೂವು ಕೊಡುವುದು, ನಮ್ಮ ಅಮಾನವೀಯ ವರ್ತನೆಗಳು ಒಂದಾ ಎರಡಾ ? ಅಲ್ಲಾ, ಸತ್ತಿರುವುದು ಕೇವಲ ಆಕೆಯ ಗಂಡ ಮಾತ್ರ. ಆಕೆಯ ಕನಸು, ವಾಂಛೆ, ಬದುಕುವ ಉತ್ಸಾಹ ಎಲ್ಲವು ಇನ್ನು ಜೀವಂತವಿರುತ್ತದೆ. ಇದನ್ನು ನಾವು ಅರ್ಥ ಮಾಡ್ಕೋಬೇಕಲ್ವಾ ? ಒಬ್ಬ ವಿಧವೆ ಯಾರ ಹಂಗಿಗೂ ಒಳಪಡದೆ ಸ್ವತಂತ್ರವಾಗಿ ಬದುಕಿ, ಬೆಳೆದುನಿಂತ ಮಗಳಿಗೆ ಮದುವೆ ಮಾಡುತ್ತಿದ್ದರೆ, ಅಲ್ಲಿಗೆ ಮುತ್ತೈದೆ (?) ಯರು ಹಾಜರ್. ಪ್ರತಿಯೊಂದಕ್ಕೂ ಅವರೇ ಮುಂದು ! ಹೆತ್ತ ತಾಯಿ ಮಂಟಪದ ಬಳಿ ಸುಳಿದಾಡಬಾರದು. ಅದು ಅಶುಭ! ಹೀಗೆ… ಆಕೆಯ ಮನಸ್ಸಿನ ಮೇಲೆ ಘಾಸಿ ಮಾಡುತ್ತಲೇ ಇರುವ ನಮ್ಮ ವರ್ತನೆಯ ಬಗ್ಗೆ ಎಂಥವರಿಗೂ ಅಸಹ್ಯ ಹುಟ್ಟಿಸುತ್ತದೆ. ಹೆಚ್ಚು ಕಮ್ಮಿ ಹಿಂದಿನ ಕೆಲವು ಸಂಪ್ರದಾಯಗಳನ್ನು ನಾವು ನಮ್ಮ ಅನುಕೂಲಕ್ಕೆ ತಕ್ಕಂತೆ ಬದಲಿಸಿಕೊಂಡಿದ್ದೇವೆ, ಅಂಥಹುದರಲ್ಲಿ ಈ ಒಂದು ಸಂಪ್ರದಾಯವನ್ನು ಬದಲಾಯಿಸುವುದು ಕಷ್ಟವಲ್ಲ. ಸ್ನೇಹಿತರೇ, ವಿಧವೆಯರಿಗೆ ಸಮಾಜದಲ್ಲಿ ಯಾವ ಅಳುಕಿಲ್ಲದೆ ಜೀವಿಸುವಂತ ವಾತಾವರಣ ಕಲ್ಪಿಸಿಕೊಡಬೇಕಿದೆ. ಅವರನ್ನು ಗೌರವಿಸೋಣ, ಪ್ರೀತಿಸೋಣ, ಪ್ರೀತ್ಸೋದು ಅಂದ್ರೆ ಕನಿಕರ, ಅನುಕಂಪ ಊಹೂಂ ಅದಲ್ಲ. ಪ್ರೀತ್ಸೋದು ಅಂದ್ರೆ………. ಛೇ ನಿಮ್ಗೆ ಅದ್ನ ನಾನ್ ಹೇಳ್ಬೇಕಾ ?
