ಇತ್ತೀಚೆಗೆ ನಮ್ಮ ಪತ್ರಿಕೆ ಓದುಗರೊಬ್ಬರು ತಮ್ಮ ಸಂಬಂಧಿಕರ ಹುಡುಗನೊಬ್ಬನಿಗೆ ಯಾವುದಾದರೊಂದು ಕೆಲಸ ಕೊಡಿಸುವಂತೆ ಕೇಳಿಕೊಂಡಿದ್ದರು. ಆತನ ಬಯೋಡಾಟ ಕಳುಹಿಸುವಂತೆ ಹೇಳಿದ್ದೆ. ಮೊನ್ನೆ ವರದಿಗೆಂದು ಹೋಗುತ್ತಿದ್ದವನಿಗೆ ಸಮೀಪದಲ್ಲಿ ಸಿಕ್ಕಿ ನಮ್ಮ ಓದುಗ ಮಿತ್ರರು ಹಠಮಾಡಿ ಆ ಹುಡುಗನ ಮನೆಗೊಮ್ಮೆ ಭೇಟಿ ನೀಡುವಂತೆ ಒತ್ತಾಯಿಸಿದರು. ಹೇಗೂ ಹೋಗುವ ದಾರಿಯಾದ್ದರಿಂದ ಒಪ್ಪಿಕೊಂಡೆ. ಇವರು ಕರೆಮಾಡಿ ತಿಳಿಸಿದ್ದರಿಂದ ಆ ಹುಡುಗನ ತಾಯಿ ಬಾಗಿಲಲ್ಲೆ ನಿಂತು ಸ್ವಾಗತಿಸಿದರು. ಈ ಹುಡುಗನ ತಂಗಿ ಪತ್ರಿಕೆಯ ಪ್ರತಿ ಅಂಕಣದ ಬಗ್ಗೆಯೂ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸುತ್ತಿದ್ದಳು. ಅವರಮ್ಮ ಒಳಗೆ ಹೋಗಿ ಬಿಸಿ ಕಾಫಿ ಹಾಗೂ ಹಲಸಿನ ಚಿಪ್ಸ್ ತಂದಿರಿಸಿ ಪತ್ರಿಕೆಯ ಬಗ್ಗೆ ಮೆಚ್ಚುಗೆ ಸೂಚಿಸಿ ನನ್ನ ಮಗನಿಗೊಂದು ದಾರಿ ತೋರಿಸಿ ಎಂದರು. ಅಷ್ಟರಲ್ಲಿ ಆ ಹುಡುಗ ತನ್ನ ಬಯೋಡಾಟ ತಂದು ನನ್ನ ಕೈಗಿಟ್ಟ. ಡಿಗ್ರಿ ಮುಗಿಸಿಕೊಂಡ ಆತ ಒಳ್ಳೆಯ ಮಾರ್ಕ್ಸ್ನ್ನೆ ಗಿಟ್ಟಿಸಿಕೊಂಡಿದ್ದ. ಅಷ್ಟರಲ್ಲಿ ಹೊರಗೆಲ್ಲೋ ತೆರಳಿದ್ದ ಅವರ ತಂದೆ ಬಂದು ನಮಸ್ಕಾರ ಅಂದರು. ಪ್ರತಿ ನಮಸ್ಕಾರ ಹೇಳಿದೆ. ನೋಡಿ ಎಲ್ಲಾದ್ರು ನನ್ ಮಗನಿಗೊಂದು ಕೆಲ್ಸ ಅಂತ ಕೊಡ್ಸಿ. ಡಿಗ್ರಿ ಮಾಡ್ಕಂಡು ಸುಮ್ನೆ ಮನೇಲಿದಾನೆ. ದುಡಿಯೋ ವಯಸ್ಸಲ್ಲಿ ದುಡಿಯಬೇಕು. ಇನ್ನು ನಾವೇ ದುಡಿದು ತಂದಿದ್ರಲ್ಲಿ ಕೂತ್ಕೊಂಡು ತಿಂದ್ರೆ… ಇನ್ನೂ ಏನೋ ಹೇಳೋಕೆ ಹೊರಟಿದ್ರು. ಅಷ್ಟರಲ್ಲಿ ಆ ಹುಡುಗ ಒಂದೇ ಸಲಕ್ಕೆ ಎದ್ದು ನಿಂತು ಅಪ್ಪನಿಗೆ ಏಯ್ ನಿಂಗೆ ನಮ್ಮನ್ನ ಹುಟ್ಸು ಅಂತ ಯಾರ್ ಹೇಳಿದ್ರು, ಮಕ್ಳನ್ನ ಮಾಡ್ಕೋಬೇಕಾದ್ರೆ ಗೊತ್ತಾಗಿಲ್ವಾ… ಅಂತ ಕಿರುಚಾಡಿದ. ಆತನ ತಾಯಿ ಸುಮ್ನೆ ಇರು ಮಗಾ… ಅಂತ ಸಮಾಧಾನಿಸಿದರು. ಅಪ್ಪ ಮೌನಕ್ಕೆ ಶರಣಾಗಿದ್ದರು. ನನ್ನ ಕೈಯಲ್ಲಿದ್ದ ಆತನ ಮಾರ್ಕ್ಸ್ ಕಾರ್ಡ್ಗಳಿಗೆ ಅರ್ಥವೇ ಇಲ್ಲದಂತಾಗಿತ್ತು. ಅವನ ಓದಿಗೆ ಯುನಿವರ್ಸಿಟಿಯೊಂದು ಫಸ್ಟ್ ಕ್ಲಾಸ್ ಅಂತ ಘೋಷಿಸಿ ಸರ್ಟಿಫಿಕೇಟ್ ನೀಡಿದೆ. ಆದರೆ…. ಅಲ್ಲಿ ವಿಧೇಯತೆ, ಸಂಸ್ಕಾರ ಅನ್ನೊ ಸಬ್ಜೆಟ್ಕೆ ಇರುವುದಿಲ್ಲ. ಇದ್ದಿದ್ದರೆ ಈ ಹುಡುಗ ಪಾಸಾಗುತ್ತಿದ್ದನಾ? ವಿದ್ಯೆ ವಿನಯವನ್ನು ಕಲಿಸುತ್ತದೆ ಎಂಬ ಮಾತು ರೂಢಿಯಲ್ಲಿದೆ. ಇದೆಂಥಾ ವಿನಯ? ಬೆಳೆದು ನಿಂತ ಮಗ-ಮಗಳ ಬಗ್ಗೆ ಹೆಮ್ಮೆಪಡಬೇಕಾದ ತಂದೆ-ತಾಯಿಗಳಿಗೆ ಮಕ್ಕಳ ಆಘಾತವನ್ನು ಸಹಿಸುವ ಶಕ್ತಿಯಾದರು ಎಲ್ಲಿಂದ ಬರುತ್ತದೆ…? ಆ ಹುಡುಗನ ಹತಾಶೆ, ಅಸಹಾಯಕತೆ ಎಲ್ಲವು ಆ ರೀತಿ ಮಾತಾಡುವಂತೆ ಮಾಡಿರಬಹುದು. ಆದರೆ ಅವೆಲ್ಲವನ್ನೂ ನಿಗ್ರಹಿಸಿಕೊಳ್ಳುವ ಆತ್ಮಸ್ಥೈರ್ಯವನ್ನು ನಾವು ಕಲಿತ ವಿದ್ಯೆ ನಮಗೆ ಕಲಿಸುತ್ತಿಲ್ಲವಾ? ಅಥವಾ ನಾವೇ ಕಲಿಯಲಿಲ್ಲವಾ? ವಿದ್ಯೆ ಇದ್ದರೂ ಸಂಸ್ಕಾರವಿಲ್ಲದೇ ಹೋದರೆ ಬೇರೆಯವರ ದೃಷ್ಠಿಗೆ ನಾವೆಷ್ಟು ಕೀಳಾಗಿ ಕಾಣಿಸುತ್ತೇವೆ ಎಂಬುದು ಮೊನ್ನೆ ನನಗೆ ಸ್ಪಷ್ಟವಾಗಿ ಅರ್ಥವಾಯಿತು. ಮತ್ತೇನು ಮಾತಾಡದೆ ನಾನು ಹೊರಟುನಿಂತೆ. ಆ ಹುಡುಗನಿಗೆ ಅವಮಾನವೋ, ಆವೇಶವೋ ಏನೊಂದು ಮಾತಾಡದೆ ಮೌನವಾಗಿದ್ದ. ಬರ್ತೀನಿ ಸರ್ ಎಂದು ಹೊರಟೆ. ತೀರಾ ಕಾರಿನ ಬಳಿ ಬಂದಾಗ ಆ ಹುಡುಗನ ತಂದೆ ಬಂದ್ರು. ಸರ್ ಬೇಜಾರ್ ಮಾಡ್ಕೋ ಬ್ಯಾಡಿ, ನಮ್ಮ ಮಗಂಗೆ ಸ್ವಲ್ಪ ಹಠ ಜಾಸ್ತಿ, ಹುಡುಗು ಬುದ್ಧಿ, ಬಿಸಿರಕ್ತ. ಎಲ್ಲಾದ್ರೂ ಒಳ್ಳೆ ಕಡೆ ಸೇರ್ಸಿ ಸಾರ್. ಮನೆ ಬಿಟ್ಟು ಇದ್ದೋನಲ್ಲ… ತುಂಬಾ ಕಷ್ಟ, ಇಲ್ಲಿ ಇರೋ ಕೆಲ್ಸ ಸಿಕ್ರೆ ನೋಡಿ… ಅಂದರು. ಇವರಿಗೆ ಅಲ್ವಾ ಆ ಹುಡುಗ ತನ್ನ ಶತ್ರುವೇನೋ ಎಂಬಂತೆ ಕೂಗಾಡಿದ್ದು, ಹುಟ್ಟಿಸಿದ್ದ್ಯಾಕೆ ಅಂತ ಕೇಳಿದ್ದು… ನಂಗೆ ಏನು ಹೇಳಬೇಕೋ ತಿಳಿಯಲಿಲ್ಲ. ಸರ್ ನೀವೆಷ್ಟು ಓದಿದ್ದೀರಿ ಅಂತ ಕೇಳಿದೆ. ನಮ್ಗೆ ಆಗ ಕಷ್ಟ ಇತ್ತು ಸಾರ್, ಮೂರನೇ ಕ್ಲಾಸ್ ಅಷ್ಟೆ ಅಂದರು. ಕೇವಲ ಮೂರನೇ ಕ್ಲಾಸ್ ಓದಿದವರು, ನನಗಿಂತಲೂ ಹಿರಿಯರು ನನ್ನ ಬಳಿಗೆ ಬಂದು ಬೇಜಾರ್ ಮಾಡ್ಕೋಬೇಡಿ ಅನ್ನುತ್ತಾರೆ. ಇದೆಲ್ಲಿಂದ ಬಂತು ಈ ಸಂಸ್ಕಾರ, ವಿಧೇಯತೆ..? ಮನಸ್ಸು ಭಾರವಾಗಿತ್ತು. ಯೌವನ, ಬಿಸಿರಕ್ತ, ಆವೇಶಕ್ಕೆ ಬಲಿಯಾದ ನಾವು ವಿನಯದಿಂದ ವರ್ತಿಸುವುದು ಬಿಟ್ಟು ಎಷ್ಟು ಕೀಳಾಗಿ ವರ್ತಿಸುತ್ತೇವೆ ಅಲ್ವಾ? ಯಾಕೋ ಇದನ್ನೆಲ್ಲಾ ನಿಮ್ಮೊಂದಿಗೆ ಹಂಚಿಕೊಳ್ಳಬೇಕು ಅನ್ಸಿತ್ತು. ಓದು ಮುಗಿದ ಮೇಲೂ ಕಲಿಯಲು ಎಷ್ಟೊಂದು ಇರುತ್ತೆ ಅಲ್ವಾ?
