ಹೊಸ ವರ್ಷದ ಆಚರಣೆ ಹಿನ್ನೆಲೆ ಪ್ರವಾಸಿಗರ ಸುರಕ್ಷತೆ ಹಾಗೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ರಾಜ್ಯದ ಕೆಲ ಪ್ರಮುಖ ಪ್ರವಾಸಿ ತಾಣಗಳಿಗೆ ಪ್ರವೇಶ ನಿರ್ಬಂಧ ವಿಧಿಸಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಗಿರಿಧಾಮಕ್ಕೆ ಡಿ.31ರ ಮಧ್ಯಾಹ್ನ 2ರಿಂದ ಜ.1ರ ಬೆಳಿಗ್ಗೆ 10 ಗಂಟೆಯವರೆಗೆ ಪ್ರವೇಶ ಬಂದ್ ಆಗಿದ್ದು, ಅತಿಥಿಗೃಹ ಬುಕ್ ಮಾಡಿದವರನ್ನು ಹೊರತುಪಡಿಸಿ ಇತರರಿಗೆ ಅವಕಾಶ ಇರುವುದಿಲ್ಲ. ಇದೇ ವೇಳೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಳ್ಳಯ್ಯನಗಿರಿ ಮತ್ತು ಸೀತಾಳಯ್ಯನಗಿರಿ ಪ್ರವಾಸಿತಾಣಗಳಿಗೆ ಡಿ.31ರ ಸಂಜೆ 6ರಿಂದ ಜ.1ರ ಬೆಳಗ್ಗೆ 6 ಗಂಟೆಯವರೆಗೆ ನಿರ್ಬಂಧ ಹೇರಲಾಗಿದ್ದು, ಪಾರ್ಟಿ ಹಾಗೂ ಹೊಸ ವರ್ಷದ ಆಚರಣೆಗೂ ಅವಕಾಶ ಇಲ್ಲ. ಆದರೆ, ರಜೆ ಹಿನ್ನೆಲೆ ಬನ್ನೇರುಘಟ್ಟ ಮೃಗಾಲಯ ಮಂಗಳವಾರವೂ ಓಪನ್ ಇರಲಿದೆ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನದ ಆಡಳಿತ ಮಂಡಳಿ ತಿಳಿಸಿದೆ.
