
ಬೆಳ್ತಂಗಡಿ: ದಿನ ಬೆಳಗಾದರೆ ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ಶಾಲೆಗಳಿಗೆ, ಕೆಲಸ-ಕಾರ್ಯಗಳಿಗೆ ತೆರಳಲು ಮುಂದಾಗುತ್ತಾರೆ. ಆದರೆ ಇದೀಗ ಭಯದ ವಾತಾವರಣವು ಸೃಷ್ಟಿಯಾಗಿದ್ದು. ಮನೆಯಿಂದ ಹೊರ ಬರಲು ಆತಂಕ ಎದುರಾಗಿದೆ. ಹಲವು ದಿನಗಳಿಂದ ಧರ್ಮಸ್ಥಳ ಸಮೀಪದ ಬೋಳಿಯಾರ್ ಬಳಿ ಗಜ ಪಡೆಗಳು ಕೃಷಿಯನ್ನು ನಾಶ ಮಾಡುತ್ತಿದ್ದು. ಇಂದು ಮುಂಜಾನೆ ಗಜರಾಜನು ಪ್ರತ್ಯಕ್ಷಗೊಂಡಿದೆ, ರಸ್ತೆ ಪಕ್ಕದಲ್ಲಿದ್ದ ಬಸ್ ನಿಲ್ದಾಣಗಳಲ್ಲಿ ಬಸ್ ಕಾಯುತ್ತಿದ್ದ ಶಾಲಾ ಮಕ್ಕಳು ಒಂಟಿ ಸಲಗವೊಂದನ್ನು ನೋಡಿ ಭಯ ಭೀತರಾಗಿ ಅಂಗಡಿಯೊಳಗೆ ದೌಡಾಯಿಸಿದ್ದಾರೆ. ನಂತರ ಗಜರಾಜನು ಕಾಡಿಗೆ ಹಿಂತಿರುಗಿದೆ. ಎರಡು ವಾರಗಳ ಮುಂಚಿತವಾಗಿ ಕೊಕ್ಕಡ ಸೌತಡ್ಕ ಸಮೀಪದ ಗುಂಡಿ ಎನ್ನುವಲ್ಲಿ ವ್ಯಕ್ತಿಯೊಬ್ಬಾತನನ್ನು ಕಾಡಾನೆಯು ಕೊಂದಿದ್ದು, ನಂತರ ಇದೀಗ ಒಂಟಿ ಸಲಗ ಕಾಣಿಸಿಕೊಂಡ ಘಟನೆಯು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಇದರಿಂದಾಗಿ ರೈತರು, ಶಾಲಾ ವಿದ್ಯಾರ್ಥಿಗಳು ಸಾರ್ವಜನಿಕರು ಓಡಾಡಲು ಸಂಕಷ್ಟದ ಪರಿಸ್ಥಿತಿ ಎದುರಾಗಿದೆ.