
ಬೆಂಗಳೂರು: ಚನ್ನಪಟ್ಟಣ, ಸಂಡೂರು ಹಾಗೂ ಶಿಗ್ಗಾಂವಿ ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆ ಬುಧವಾರ ನಡೆಯಲಿದ್ದು, ಬೆಳಗ್ಗೆ 7 ಗಂಟೆಗೆ ಮತದಾನ ಆರಂಭಗೊಂಡು ಸಂಜೆ 6 ಗಂಟೆಗೆ ಮುಕ್ತಾಯವಾಗಲಿದೆ. ಮೂರು ಕ್ಷೇತ್ರಗಳ ಚುನಾವಣೆಯಲ್ಲಿ ಗೆಲ್ಲಲು ಮೂರು ರಾಜಕೀಯ ಪಕ್ಷಗಳು ಹರಸಾಹಸ ಪಡುತ್ತಿದ್ದು, ರಾಜ್ಯ ನಾಯಕರಿಗೂ ಇದೊಂದು ಪ್ರತಿಷ್ಠೆಯ ಚುನಾವಣೆಯಾಗಿದೆ. ಮೂರು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕುಟುಂಬ ರಾಜಕಾರಣವೇ ಮೇಲೈಸುತ್ತಿದೆ. ಕಣದಲ್ಲಿ ಇಬ್ಬರು ಮಾಜಿ ಸಿಎಂಗಳ ಮಕ್ಕಳು ಇರುವುದು ಅಖಾಡವನ್ನು ರಂಗೇರಿಸಿದೆ. ಚನ್ನಟ್ಟಣದಲ್ಲಿ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಅಖಾಡಲ್ಲಿದ್ದರೆ, ಶಿಗ್ಗಾಂವಿಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಪುತ್ರ ಭರತ್ ಬೊಮ್ಮಾಯಿ ಕಣದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಕ್ಷೇತ್ರವನ್ನು ಗೆಲ್ಲಲು ಇಬ್ಬರು ಮಾಜಿ ಸಿಎಂಗಳು ಹರಸಾಹಸ ಪಡುತ್ತಿದ್ದಾರೆ. ಇದು ಅವರ ಮಕ್ಕಳ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಮಹತ್ವದ ಚುನಾವಣೆಯಾಗಿದೆ.
ಕಣದಲ್ಲಿರುವ ಪ್ರಮುಖರುಗಳ ವಿವರ!
*►ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ
ಕಾಂಗ್ರೆಸ್ – ಸಿಪಿ ಯೋಗೇಶ್ವರ್
ಎನ್ ಡಿ ಎ – ನಿಖಿಲ್ ಕುಮಾರಸ್ವಾಮಿ
ಎಸ್ಡಿಪಿಐ – ಮುಹಮ್ಮದ್ ಫಾಸಿಲ್
*►ಶಿಗ್ಗಾಂವಿ ವಿಧಾನಸಭಾ ಕ್ಷೇತ್ರ
ಕಾಂಗ್ರೆಸ್ – ಯಾಸೀರ್ ಖಾನ್ ಪಠಾಣ್
ಬಿಜೆಪಿ – ಭರತ್ ಬೊಮ್ಮಾಯಿ
ಕೆಆರ್ ಎಸ್ – ರವಿಕೃಷ್ಣಾ ರೆಡ್ಡಿ
*►ಸಂಡೂರು ವಿಧಾನಸಭಾ ಕ್ಷೇತ್ರ
ಕಾಂಗ್ರೆಸ್ – ಇ ಅನ್ನಪೂರ್ಣ
ಬಿಜೆಪಿ – ಬಂಗಾರು ಹನುಮಂತು
ಇನ್ನು ಮೂರು ಕ್ಷೇತ್ರಗಳ ಉಪ ಚುನಾವಣೆಯ ಹಿನ್ನೆಲೆಯಲ್ಲಿ ವ್ಯಾಪಕ ಭದ್ರತೆಯನ್ನು ಕೈಗೊಳ್ಳಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈಗಾಗಲೇ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ. ಕೊನೆಯ ದಿನ ಮನೆ ಮನೆ ಪ್ರಚಾರಕ್ಕೆ ಅವಕಾಶ ಇದೆ. ಇನ್ನು ಸೂಕ್ಷ್ಮ ಅತಿಸೂಕ್ಷ್ಮ ಮತಗಟ್ಟೆಗಳಲ್ಲಿ ಹೆಚ್ಚಿನ ಭದ್ರತೆಯನ್ನು ನಿಯೋಜನೆ ಮಾಡಲಾಗಿದೆ.